ಚಂಡಿಪುರ, ಒಡಿಶಾ: ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ 2 ಯಶಸ್ವಿ ತರಬೇತಿ ಉಡಾವಣೆಯಾಗಿದೆ. ಒಡಿಶಾದ ಕರಾವಳಿಯಲ್ಲಿರುವ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಮಂಗಳವಾರ ಈ ಪರೀಕ್ಷೆಯನ್ನು ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸುಸ್ಥಾಪಿತ ವ್ಯವಸ್ಥೆ, ಪೃಥ್ವಿ-II ಕ್ಷಿಪಣಿ ಭಾರತದ ಪರಮಾಣು ನಿರೋಧಕತೆಯ ಅವಿಭಾಜ್ಯ ಅಂಗವಾಗಿದೆ. ಕ್ಷಿಪಣಿಯು ಹೆಚ್ಚಿನ ನಿಖರತೆಯೊಂದಿಗೆ ತನ್ನ ಗುರಿಯನ್ನು ಮುಟ್ಟಿದೆ.
ಬಳಕೆದಾರರ ತರಬೇತಿ ಉಡಾವಣೆಯು ಕ್ಷಿಪಣಿಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಿದೆ. ಪೃಥ್ವಿ-II ಕ್ಷಿಪಣಿಯ ಸ್ಟ್ರೈಕ್ ರೇಂಜ್ ಸುಮಾರು 350 ಕಿ.ಮೀ ಆಗಿದೆ. ಪೃಥ್ವಿ-II ಕ್ಷಿಪಣಿಯು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಅಲ್ಪ-ಶ್ರೇಣಿಯ, ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ಭಾರತದ ಪೃಥ್ವಿ ಕ್ಷಿಪಣಿ ಸರಣಿಯ ಭಾಗವಾಗಿದೆ, ಇದರಲ್ಲಿ ಪೃಥ್ವಿ-I, ಪೃಥ್ವಿ-II, ಪೃಥ್ವಿ-III ಮತ್ತು ಧನುಷ್ ಸೇರಿವೆ.
ಪೃಥ್ವಿ II ಸ್ವದೇಶಿ ಅಭಿವೃದ್ಧಿ ಪಡಿಸಿದ ಕ್ಷಿಪಣಿಯಾಗಿದ್ದು, 500 ಕೆ.ಜಿ.ವರೆಗಿನ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-II ಅನ್ನು ಕಳೆದ ವರ್ಷ ಜೂನ್‌ನಲ್ಲಿ ಒಡಿಶಾದ ಚಂಡಿಪುರದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಕ್ಷಿಪಣಿಯು ಅತ್ಯಂತ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ ಭಾರತವು ತನ್ನ ಕ್ಷಿಪಣಿ ಸಾಮರ್ಥ್ಯವನ್ನು ನಿರಂತರವಾಗಿ ಬಲಪಡಿಸುತ್ತಿದೆ.
ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ಭಾರತವು ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಮೇಲ್ಮೈಗೆ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. 5,000 ಕಿಮೀಗಿಂತ ಹೆಚ್ಚು ದೂರದ ಗುರಿಯನ್ನು ಮುಟ್ಟುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಅಗ್ನಿ-5 ರ ಒಂಬತ್ತನೇ ಪರೀಕ್ಷೆಯಾಗಿದ್ದು, ಇದನ್ನು ಮೊದಲು 2012 ರಲ್ಲಿ ಪರೀಕ್ಷಿಸಲಾಯಿತು. ಈ ಕ್ಷಿಪಣಿ ಬೀಜಿಂಗ್ ಸೇರಿದಂತೆ ಚೀನಾದ ಬಹುತೇಕ ನಗರಗಳನ್ನು ತಲುಪಬಲ್ಲದು. ಇದಲ್ಲದೆ, ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-III ರ ಯಶಸ್ವಿ ತರಬೇತಿ ಉಡಾವಣೆ ನವೆಂಬರ್‌ನಲ್ಲಿ ಮಾಡಲಾಯಿತು.
ಓದಿ: ಡ್ರೋನ್ ಮೂಲಕ ಅಡಿಕೆಗೆ ಔಷಧಿ ಸಿಂಪಡಣೆ.. ಸುಳ್ಯದಲ್ಲಿ ಮೊದಲ ಪ್ರಯೋಗ