ನವದೆಹಲಿ/ಗ್ರೇಟರ್ ನೋಯ್ಡಾ: ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಆಲ್ಟೊ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪೊಲೀಸರು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಇಬ್ಬರ ಯುವಕರನ್ನು ಪತ್ತೆ ಹೆಚ್ಚಿಸಿ, ಕಠಿಣ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಿಗೆ ಬರೋಬ್ಬರಿ 27,500 ರೂಪಾಯಿಗಳ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿನ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಆಲ್ಟೊ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತಿದ್ದು, ಮತ್ತೊಬ್ಬ ಕಾರು ಅತಿವೇಗವಾಗಿ ಚಲಿಸುತ್ತಿರುವುದು ಸೆರೆಯಾಗಿದೆ. ಇಂತಹ ಅಪಾಯಕಾರಿಯಾದ ಚಾಲನೆ ಮತ್ತು ಸ್ಟಂಟ್ ಮಾಡಿರುವ ವಿಡಿಯೋ ಗ್ರೇಟರ್ ನೋಯ್ಡಾದ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದೆ.
ಅಂತೆಯೇ, ಟ್ರಾಫಿಕ್ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದರಲ್ಲಿ ದಾಖಲಾದ ಕಾರಿನ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ನಂತರ ಇದರ ಆಧಾರದ ಮೇಲೆಯೇ ಹೆಚ್ಚಿನ ತನಿಖೆ ಕೈಗೊಂಡು ಈ ಹುಚ್ಚಾಟದ ಸ್ಟಂಟ್ನಲ್ಲಿ ತೊಡಗಿದ್ದ ವಿಪಿನ್ ಮತ್ತು ನಿಶಾಂತ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಸ್ಟಂಟ್ ಮಾಡಲು ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ಕಚೇರಿ ಸಮೀಪದಲ್ಲೇ ಸ್ಟಂಟ್: ಮತ್ತೊಂದು ಅಚ್ಚರಿ ವಿಷಯ ಎಂದರೆ ಸಹಾಯಕ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿ ಸಮೀಪದಲ್ಲೇ ಈ ಇಬ್ಬರು ಯುವಕರು ಆಲ್ಟೊ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದರು ಎನ್ನಲಾಗಿದೆ. ಡಿಸಿಪಿ ಕಚೇರಿಯಿಂದ ಸ್ವಲ್ಪ ದೂರದಲ್ಲಿ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಾ, ಹುಚ್ಚಾಟ ಪ್ರದರ್ಶಿಸುತ್ತಿದ್ದರು ಎಂಬುವುದು ವೈರಲ್ ವಿಡಿಯೋ ಮೂಲಕ ಪೊಲೀಸರು ಗಮನಿಸಿದ್ದಾರೆ.
ಇದೇ ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಸಂಚಾರ ನಿಯಮಗಳ ಉಲ್ಲಂಘನೆ ಸೇರಿದಂತೆ ಕಾನೂನಿನ ಪ್ರಕಾರ 27,500 ರೂ.ಗಳ ದಂಡವನ್ನು ವಿಧಿಸಿದ್ದಾರೆ. ಇನ್ಮುಂದೆ ಯಾವುದೇ ರೀತಿಯ ಸ್ಟಂಟ್ ಮಾಡಬಾರದು. ಒಂದು ವೇಳೆ ಸ್ಟಂಟ್ ಮಾಡುವುದರಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರೀಲ್ಸ್ಗಾಗಿ ಹುಚ್ಚಾಟ ಆರೋಪ: ಸಾಕಷ್ಟು ಯುವಕರು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ, ಇದರಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಫೋಸ್ಟ್ಗಳನ್ನು ಮಾಡಲು ಇಂತಹ ಹೆಚ್ಚಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ರೀಲ್ಸ್ ಮಾಡಲು ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಅದರಲ್ಲೂ, ಗ್ರೇಟರ್ ನೋಯ್ಡಾ ಸುತ್ತಮತ್ತಲು ಕಳೆದ ಕೆಲವು ತಿಂಗಳುಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಇಂತಹ ಹುಚ್ಚಾಟದಲ್ಲಿ ತೊಡಗಿಸಿಕೊಂಡು ಇಬ್ಬರಿಗೆ ಭಾರಿ ಮೊತ್ತದ ದಂಡವನ್ನು ಪೊಲೀಸರು ವಿಧಿಸುವ ಮೂಲಕ ಕಠಿಣ ಕ್ರಮದ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಅಮಾನವೀಯ.. ಬೈಕ್ ಸವಾರನನ್ನು ಎಳೆದೊಯ್ದ ಕಾರು.. ಇಬ್ಬರು ಸಾವು!