ಸಿಲ್ಚರ್ (ಅಸ್ಸೋಂ): ಸಿಲ್ಚರ್ ಜಿಲ್ಲೆಯ ಖಾಸಗಿ ಕಾಲೇಜೊಂದರ ತರಗತಿಯಲ್ಲಿ ಯುವಕ-ಯುವತಿಯರು ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತುಕೊಂಡಿದೆ. ಅನುಚಿತ ವರ್ತನೆಯಲ್ಲಿ ತೊಡಗಿದ ಏಳು ವಿದ್ಯಾರ್ಥಿಗಳಿಗೆ 'ಅಮಾನತು ಶಿಕ್ಷೆ' ವಿಧಿಸಿದೆ.
11ನೇ ತರಗತಿಯ ಯುವಕ-ಯುವತಿಯರ ಗುಂಪು ಪರಸ್ಪರ ಅಪ್ಪಿಕೊಳ್ಳುವುದು ಮತ್ತು ಕುಚೇಷ್ಟೆಯಲ್ಲಿ ತೊಡಗಿದ್ದರು. ಇದೇ ತರಗತಿಯಲ್ಲಿದ್ದ ಮತೊಬ್ಬ ವಿದ್ಯಾರ್ಥಿ ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.
ಈ ವಿಡಿಯೋ ವೈರಲ್ ಆಗಿದೆ. ನೆಟಿಜನ್ಗಳಿಂದಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕಾಲೇಜಿನ ಆಡಳಿತದ ಮಂಡಳಿ ಬಗ್ಗೆಯೂ ದೂರಿದ್ದರು. ಇದಾದ ನಂತರ ವಿಡಿಯೋವನ್ನು ಬುಧವಾರ ಗಮನಿಸಿದ ಆಡಳಿತ ಮಂಡಳಿಯು ಕೃತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ತಕ್ಷಣದಿಂದಲೇ ಸಸ್ಪೆಂಡ್ ಮಾಡಿದೆ. ಇದರಲ್ಲಿ ನಾಲ್ವರು ಯುವತಿಯರು ಮತ್ತು ನಾಲ್ವರು ಯುವಕರಿದ್ದಾರೆ.
ಅನುಚಿತ ವರ್ತನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ. ಇಂತಹ ಚಟುವಟಿಕೆಗಳು ಸಂಸ್ಥೆಯ ಶಿಸ್ತಿನ ಉಲ್ಲಂಘನೆಗೆ ಸಮ. ಆದ್ದರಿಂದ, ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಅನಿರ್ದಿಷ್ಟಾವಧಿಗೆ ತರಗತಿಗಳಿಗೆ ಹಾಜರಾಗದಂತೆ ಅಮಾನತುಗೊಳಿಸಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಪ್ರಾಂಶುಪಾಲ ಪ್ರಜ್ಞಾದೀಪ್ ಚಂದ್ರ ಪ್ರತಿಕ್ರಿಯಿಸಿ, "ಉಪಹಾರದ ವಿರಾಮದ ಸಮಯದಲ್ಲಿ ಶಿಕ್ಷಕರು ತರಗತಿಯಲ್ಲಿ ಇರುವುದಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದುರ್ವರ್ತನೆ ತೋರಿದ್ದಾರೆ. ಕಾಲೇಜಿನ ಕ್ಯಾಂಪಸ್ನಲ್ಲಿ ಸಿಸಿಟಿವಿ ಕ್ಯಾಮರಾಗಳಿವೆ. ಅಲ್ಲದೇ, ಮೊಬೈಲ್ ಪೋನ್ಗಳ ಬಳಕೆಗೂ ನಿರ್ಬಂಧವಿದೆ" ಎಂದರು.
ಈ ವಿದ್ಯಾರ್ಥಿಗಳು 15 ದಿನಗಳ ಹಿಂದಷ್ಟೇ ಕಾಲೇಜು ಪ್ರವೇಶ ಪಡೆದಿದ್ದಾರೆ. ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಇದನ್ನೂ ಓದಿ: ವಿಡಿಯೋ ಕಾಲ್ ಸ್ವೀಕರಿಸಿ ಹಳ್ಳಕ್ಕೆ ಬಿದ್ದ ಬಿಲ್ಡರ್: ಅಶ್ಲೀಲ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ