ನವದೆಹಲಿ : ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಆದರೆ, ಇದನ್ನ ಆಡಳಿತ ಮಂಡಳಿ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಕಾನೂನು ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಉದ್ದೇಶದಿಂದ ಒಂದು ದಿನ ಮುಂಚಿತವಾಗಿ ಸೆಮಿನಾರ್ ಹಾಲ್ ಕೀ ನೀಡುವಂತೆ ಕೇಳಿದ್ದರು. ಆದರೆ, ಆಡಳಿತ ಮಂಡಳಿ ಇದಕ್ಕೆ ನಿರಾಕರಣೆ ಮಾಡಿದ್ದಕ್ಕಾಗಿ ಅವರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಡಳಿತ ವಿಭಾಗದ ರಜನಿ ಅಬ್ಬಿ, ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರನ್ನ ಕರೆಸಲಾಗಿತ್ತು. ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಸೆಮಿನಾರ್ ಹಾಲ್ನ ಕೀ ನೀಡಿಲ್ಲ ಎಂಬ ಕಾರಣವಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರನ್ನ ಕರೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸಿ ಮೇಲೆ ಪ್ಯಾರ್.. ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವತಿಯ ರಂಪಾಟ
'ಸವಾಲುಗಳು ಮತ್ತು ಭಾರತೀಯ ಸಂವಿಧಾನ' ಎಂಬ ವಿಷಯದ ಮೇಲೆ ಕಾನೂನು ವಿಭಾಗದ ವಿದ್ಯಾರ್ಥಿಗಳು ಸೆಮಿನಾರ್ ಆಯೋಜನೆ ಮಾಡಿದ್ದರು. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮುಖ್ಯ ಅತಿಥಿಯಾಗಿ ಆಗಮಿಸಬೇಕಾಗಿತ್ತು. ಹೀಗಾಗಿ, ಒಂದು ದಿನ ಮುಂಚಿತವಾಗಿ ಸೆಮಿನಾರ್ ಹಾಲ್ ಕೀ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಈಗಾಗಲೇ ಸೆಮಿನಾರ್ ಹಾಲ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವ ಕಾರಣ, ಅಂತಹ ಯಾವುದೇ ಸೆಮಿನಾರ್ ನಡೆಸಲು ಅನುಮತಿ ನೀಡಲ್ಲ ಎಂದು ಅಧಿಕಾರಿಗಳು ಕೀ ನೀಡಲು ನಿರಾಕರಣೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಆಡಳಿತ ಮಂಡಳಿ ಪೊಲೀಸರನ್ನ ಕ್ಯಾಂಪನ್ನೊಳಗೆ ಕರೆಯಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೆಲವರು ಗಾಯಗೊಂಡಿದ್ದಾರೆಂದು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥ ಅಭಿಜ್ಞಾನ್ ಆರೋಪ ಮಾಡಿದ್ದಾರೆ. ಆದರೆ, ಇದನ್ನ ಸಂಪೂರ್ಣವಾಗಿ ತಳ್ಳಿ ಹಾಕಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಆರೋಪ ರಾಜಕೀಯ ಪ್ರೇರಿತವಾಗಿದ್ದು, ಗದ್ದಲ ಸೃಷ್ಟಿ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಹೇಳಿದ್ದಾರೆಂದು ತಿಳಿಸಿದೆ.