ಪುದುಚೇರಿ: ಪ್ರಧಾನಿ ಮೋದಿ ಕುರಿತ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರವು ದೇಶದಲ್ಲೇ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ವಿಚಾರ ಈಗ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಆದರೀಗ ವಿದ್ಯಾರ್ಥಿ ಸಂಘಟನೆಗಳು ಈ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಮುಂದಾಗಿವೆ. ಇದು ಈಗ ವಿವಿ ಮತ್ತು ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆಗೂ ಕಾರಣವಾಗಿದೆ.
ಇಂದು ಪುದುಚೇರಿ ವಿವಿಯಲ್ಲಿ ಈ ಸಂಬಂಧ ಭಾರಿ ವಾದ- ಪ್ರತಿವಾದ ಹಾಗೂ ಮಾತಿನ ಚಕಮಕಿಗಳು ನಡೆದು, ವಿವಿ ಆವರಣ ರಣಾಂಗಣವಾಗಿತ್ತು. ಇನ್ನು ಹೈದರಾಬಾದ್ ವಿಶ್ವವಿದ್ಯಾಲಯ, ಜೆಎನ್ಯು ಹಾಗೂ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿವೆ.
ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದ ವಿವಿ: ಪಾಂಡಿಚೇರಿ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಘೋಷಿಸಿದ್ದವು. ಆದರೆ, ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಇದನ್ನು ಪ್ರದರ್ಶಿಸಬಾರದು ಎಂದು ವಿಶ್ವವಿದ್ಯಾಲಯದ ಆಡಳಿತ ನಿರ್ಬಂಧ ಹೇಳಿತ್ತು. ಆದರೆ, ಇದಕ್ಕೆ ಸೆಡ್ಡು ಹೊಡೆದ ವಿದ್ಯಾರ್ಥಿ ಸಂಘಟನೆಗಳು ಹಾಸ್ಟೆಲ್ ಕೊಠಡಿಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಘೋಷಿಸಿದ್ದವು. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಘೋಷಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಕೂಡಾ ಕ್ಯಾಂಪಸ್‌ನಲ್ಲಿ ನಿಯೋಜಿಸಲಾಗಿತ್ತು.
ಇದನ್ನೂ ಓದಿ : ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಣೆ: ಪಾಂಡಿಚೇರಿ ವಿಶ್ವವಿದ್ಯಾನಿಲಯದಲ್ಲಿ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿದ ವಿದ್ಯಾರ್ಥಿಯೊಬ್ಬರು ಮಾತನಾಡಿ, ಬಿಬಿಸಿ ಬಿಡುಗಡೆ ಮಾಡಿದ ಮೋದಿ ಅವರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ವಿದ್ಯಾರ್ಥಿ ಸಂಘಟನೆ ಘೋಷಿಸಿತು. ಆದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅದಕ್ಕೆ ಅನುಮತಿ ನೀಡಲಿಲ್ಲ. ಅಲ್ಲದೆ, ಮಧ್ಯಾಹ್ನ 3 ಗಂಟೆಯ ನಂತರ ವಿಶ್ವವಿದ್ಯಾನಿಲಯದಾದ್ಯಂತ ವಿದ್ಯುತ್ ಮತ್ತು ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಕಡಿತಗೊಳಿಸಲಾಯಿತು. ಇದರ ನಂತರ, ನಾವು ನಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಸುಮಾರು 300 ವಿದ್ಯಾರ್ಥಿಗಳೊಂದಿಗೆ ಜೆಂಡರ್ ಗೇಟ್ ಬಳಿ ವೀಕ್ಷಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೆಎನ್ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ
ವಿದ್ಯಾರ್ಥಿ ಸಂಘಟನೆಗಳ ನಡುವೆ ವಾಗ್ವಾದ: ಆಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) 10 ಸದಸ್ಯರು ನಮ್ಮ (ಡಿವೈಎಫ್‌ಐ) ವಿರುದ್ಧ ಜೈ ಶ್ರೀ ರಾಮ್, ಮೋದಿ ಮೋದಿ, ಸಾಮಿಯೇ ಶರಣಂ ಅಯ್ಯಪ್ಪ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಅವರು ನಮಗೆ ಹಿಂದಿಯಲ್ಲಿ ಬೆದರಿಕೆ ಹಾಕಿದರು. ಇದರಿಂದ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಹಾಗೂ ಎಬಿವಿಪಿ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಆಗ ವಿಶ್ವವಿದ್ಯಾಲಯದ ಖಾಸಗಿ ಭದ್ರತಾ ಸಿಬ್ಬಂದಿ ರಕ್ಷಣೆ ನೀಡಿದ್ದಾರೆ. ಈಗ ವಿದ್ಯುತ್ ಸಂಪರ್ಕ ಬಂದಿದೆ. ಆದರೆ ಇಂಟರ್‌ನೆಟ್ ಸೌಲಭ್ಯ ಬಂದಿಲ್ಲ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ್ದ ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್ಗೆ ರಾಜೀನಾಮೆ