ಜೈಪುರ (ರಾಜಸ್ಥಾನ): ಕಳೆದ ವಾರವಷ್ಟೇ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಕೊಂದು ಹಾಕಿದ್ದವು. ಈ ಕಹಿ ಘಟನೆ ಮಾಸುವ ಮುನ್ನವೇ ರಾಜಸ್ಥಾನದಲ್ಲೂ ಇಂಥದ್ದೆ ಘಟನೆ ಬೆಳಕಿಗೆ ಬಂದಿದೆ. ಸಿರೋಹಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಯ ಸನಿಹದಲ್ಲೇ ಮಲಗಿದ್ದ ಗಂಡು ಮಗುವನ್ನು ಬೀದಿ ನಾಯಿಯೊಂದು ಎಳೆದೊಯ್ದು ಕಚ್ಚಿ ಕೊಂದಿದೆ.
ವಿವರ: ಪಾಲಿ ಜಿಲ್ಲೆಯ ಜವಾಯಿಬಂದ್ ನಿವಾಸಿ ಮಹೇಂದ್ರ ಮೀನಾ ಶ್ವಾಸಕೋಶ ಸಂಬಂಧಿ ಸಿಲಿಕೋಸಿಸ್ ಚಿಕಿತ್ಸೆಗೆಂದು ಸಿರೋಹಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರ ಪತ್ನಿ ರೇಖಾ ತನ್ನ ಮೂವರು ಮಕ್ಕಳೊಂದಿಗೆ ಪತ್ನಿಯನ್ನು ಉಪಚರಿಸುತ್ತಿದ್ದರು. ಆದರೆ, ಸೋಮವಾರ ರೇಖಾ ನಿದ್ರೆಗೆ ಜಾರಿದ್ದಾರೆ. ಅದು ತಡರಾತ್ರಿಯ ಸಮಯ. ಈ ಸಂದರ್ಭದಲ್ಲಿ ಎರಡು ಬೀದಿ ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್ ಪ್ರವೇಶಿಸಿದ್ದವು. ಇದರಲ್ಲಿ ಒಂದು ನಾಯಿ ಮಗುವನ್ನು ಕಚ್ಚಿ ಎಳೆದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಸೀತಾರಾಮ್ ತಿಳಿಸಿದ್ದಾರೆ.
ಆಸ್ಪತ್ರೆ ವಾರ್ಡ್ ಹೊರಗೆ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಘಟನೆ ನಡೆದಾಗ ಆಸ್ಪತ್ರೆಯ ಸಿಬ್ಬಂದಿ ಕೂಡ ವಾರ್ಡ್‌ನಲ್ಲಿ ಇರಲಿಲ್ಲ. ವೈದ್ಯಾಧಿಕಾರಿಗಳು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.
ಮಹೇಂದ್ರ ಮೀನಾ ಮಾತನಾಡಿ, "ಸೋಮವಾರ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಯಿಗಳು ವಾರ್ಡ್‌ನೊಳಗೆ ಬರುತ್ತಿದ್ದವು. ನಾನು ಅವುಗಳನ್ನು ಓಡಿಸಿದೆ. ಎರಡು ಗಂಟೆಗೆ ನನ್ನ ಹೆಂಡತಿಗೆ ಎಚ್ಚರವಾಯಿತು. ಆಗ ನಾಯಿಗಳು ನಮ್ಮ ಮಗುವನ್ನು ಕಚ್ಚಿರುವುದು ಆಕೆಗೆ ಗೊತ್ತಾಗಿದೆ. ಆದರೆ, ಇಂದು ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ನನಗೆ ತಿಳಿಸದೇ ಖಾಲಿ ಪೇಪರ್‌ಗಳಲ್ಲಿ ನನ್ನ ಹೆಂಡತಿಯ ಸಹಿ ತೆಗೆದುಕೊಂಡು ಮಗನ ಅಂತ್ಯಕ್ರಿಯೆ ಮಾಡಿದ್ದಾರೆ. ನನಗೆ ಮಗನ ಮುಖವನ್ನೂ ನೋಡಲಾಗಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಈ ಘಟನೆಯ ಬಗ್ಗೆ ಸಿರೋಹಿ ಜಿಲ್ಲಾಸ್ಪತ್ರೆಯ ಹಂಗಾಮಿ ಪ್ರಧಾನ ವೈದ್ಯಕೀಯ ಅಧಿಕಾರಿ ವೀರೇಂದ್ರ ಪ್ರತಿಕ್ರಿಯಿಸಿ, "ರಾತ್ರಿ ರೋಗಿಯ ಅಟೆಂಡೆಂಟ್ ಮಲಗಿದ್ದರು. ಆಸ್ಪತ್ರೆಯ ಸಿಬ್ಬಂದಿ ಬೇರೆ ವಾರ್ಡ್‌ನಲ್ಲಿ ಹಾಜರಾಗಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿಯಿಂದಲೂ ತನಿಖೆ ನಡೆಸಲಾಗುವುದು. ತನಿಖೆಯ ನಂತರವೇ ನಾನು ಹೆಚ್ಚಿನ ಮಾಹಿತಿ ನೀಡುತ್ತೇನೆ" ಎಂದು ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪುರೋಹಿತ್ ಘಟನೆಯನ್ನು ಖಂಡಿಸಿದ್ದು, "ಈ ದುರಂತಕ್ಕೆ ಆಸ್ಪತ್ರೆಯ ಅಧಿಕಾರಿಗಳೇ ಹೊಣೆ. ಆಸ್ಪತ್ರೆ ಆಡಳಿತದ ಸಂಪೂರ್ಣ ವಿಫಲವಾಗಿದೆ. ಬೀದಿ ನಾಯಿಗಳು ಆಸ್ಪತ್ರೆಯೊಳಗೆ ಓಡಾಡುತ್ತಿವೆ. ಆದರೆ, ಮುಖ್ಯಮಂತ್ರಿ ಮತ್ತು ಸ್ಥಳೀಯ ಶಾಸಕರು ರಾಜ್ಯದ ಆರೋಗ್ಯ ಸೌಲಭ್ಯಗಳ ಉತ್ತಮವಾಗಿವೆ ಎಂದು ಹೇಳಿಕೊಂಡು ಸುತ್ತಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಾಲಕನ ಕಚ್ಚಿ ತಿಂದ ಬೀದಿ ನಾಯಿಗಳು: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ