ಲಖನೌ (ಉತ್ತರ ಪ್ರದೇಶ) : ಪ್ರೀತಿ, ಪ್ರೇಮ ಎಂಬುದು ಯಾವಾಗ, ಹೇಗೆ ಹುಟ್ಟಿಕೊಳ್ಳುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ಕಣ್ಣಿಲ್ಲ ಎಂಬ ಮಾತುಗಳನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಈ ಪ್ರೀತಿ ಎಷ್ಟು ವಿಚಿತ್ರ ಎಂದರೆ ಇಬ್ಬರು ಹುಡುಗಿಯರ ನಡುವಿನ ಬಾಲ್ಯದ ಗೆಳೆತನ ಪ್ರೇಮಕ್ಕೆ ತಿರುಗಿರುವ ಘಟನೆ ಲಖನೌನಲ್ಲಿ ನಡೆದಿದೆ. ಹೇಳಿ ಕೇಳಿ ಇಬ್ಬರೂ ಬಾಲ್ಯ ಸ್ನೇಹಿತರು. ಪರಸ್ಪರ ಒಟ್ಟಿಗೇ ಇದ್ದರು. ಇದೀಗ ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ಒಟ್ಟಿಗೆ ಬಾಳುವುದಾಗಿ ಹಠ ಹಿಡಿದಿದ್ದಾರೆ.
ಈ ಇಬ್ಬರೂ ಹುಡುಗಿಯರು ಉತ್ತರಪ್ರದೇಶದ ಲಕ್ನೋದ ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ. ಇಬ್ಬರು ಬಾಲ್ಯದಿಂದಲೂ ಸ್ನೇಹಿತರು. ಅಷ್ಟೇ ಅಲ್ಲದೆ ಹುಡುಗಿಯರ ಪೋಷಕರು ಪರಸ್ಪರ ಪರಿಚಿತರಾಗಿದ್ದರು. ಇನ್ನು ಎರಡೂ ಕುಟುಂಬಗಳು ಪರಿಚಯಸ್ಥರಾದ್ದರಿಂದ ಈ ಹುಡುಗಿಯರು ಆಗಾಗ್ಗೆ ಇಬ್ಬರ ಮನೆಗೂ ಹೋಗುತ್ತಿದ್ದರು. ಹೆಚ್ಚಾಗಿ ಈ ಹುಡುಗಿಯರು ಒಬ್ಬರ ಮನೆಯಲ್ಲೇ ತಂಗುತ್ತಿದ್ದರು. ಪರಸ್ಪರ ಪರಿಚಯವಾದ್ದರಿಂದ ಪೋಷಕರೂ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಇದು ಮುಂದುವರೆದು ಈ ಬಾಲಕಿಯರ ಸ್ನೇಹ ಪ್ರೀತಿಗೆ ತಿರುಗಿದೆ. ಪ್ರೀತಿ ಎಷ್ಟು ಗಾಢವಾಗಿದೆ ಎಂದರೆ ಪರಸ್ಪರ ಒಟ್ಟಿಗೆ ಜೀವಿಸಲು ಈ ಹುಡುಗಿಯರು ನಿರ್ಧರಿಸಿದ್ದರು.
ಇನ್ನು, ತಮ್ಮ ಮಕ್ಕಳು ವಯಸ್ಸಿಗೆ ಬಂದಿರುವುದರಿಂದ ಮದುವೆ ಮಾಡಿಸಬೇಕೆಂದು ಇಬ್ಬರ ಪೋಷಕರು ವರ ಅನ್ವೇಷಣೆಯಲ್ಲಿ ತೊಡಗಿದ್ದರು. ಅಷ್ಟೇ ಅಲ್ಲದೆ ಹಲವು ಮದುವೆ ಪ್ರಸ್ತಾಪಗಳು ಬಂದರೂ ಈ ಹುಡುಗಿಯರು ಎಲ್ಲವನ್ನೂ ನಿರಾಕರಿಸುತ್ತಾ ಬಂದಿದ್ದರು. ಅಂತೂ ಕೊನೆಗೆ ಈ ಹುಡುಗಿಯರು ತಾವು ಪರಸ್ಪರ ಪ್ರೀತಿಸುವುದಾಗಿ ಹೇಳಿದಾಗ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಈ ಹಿನ್ನೆಲೆ ಹೇಗಾದರೂ ಮಾಡಿ ಇಬ್ಬರನ್ನು ದೂರ ಮಾಡುವ ನಿಟ್ಟಿನಲ್ಲಿ ಇಬ್ಬರ ಪೋಷಕರು ಶ್ರಮಪಟ್ಟಿದ್ದಾರೆ. ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಈ ಹುಡುಗಿಯರು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಹುಡುಗಿಯರ ಪೋಷಕರು ಯಾವುದೇ ದಾರಿ ಕಾಣದೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಲ್ಲಿಯೂ ಈ ಹುಡುಗಿಯರ ಮನವೊಲಿಸಲು ಮಹಿಳಾ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಹುಡುಗಿಯರು ಮಾತ್ರ ತಮ್ಮ ನಿರ್ಧಾರವನ್ನು ಬದಲಿಸಿಲ್ಲ. ಕೊನೆಗೆ ಈ ಹುಡುಗಿಯರು ತಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಿ, ನಾವು ವಯಸ್ಕರು. ನಮ್ಮಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಪೊಲೀಸರಿಗೇ ಹೇಳಿದ್ದಾರೆ. ಕೊನೆಗೆ ಪೊಲೀಸರು ಏನೂ ಮಾಡಲು ಸಾಧ್ಯವಾಗದೇ ಇಬ್ಬರೂ ವಯಸ್ಕರಾಗಿರುವುದರಿಂದ ಪೋಷಕರ ವಿರೋಧದ ನಡುವೆಯೂ ಒಟ್ಟಿಗೆ ಇರಲು ಅನುಮತಿ ನೀಡಿದ್ದಾರೆ.
ಸಹಜೀವನ ನಡೆಸಲು ಪೊಲೀಸರಿಂದ ಒಪ್ಪಿಗೆ : ಈ ಬಗ್ಗೆ ರಹೀಮಾಬಾದ್ ಇನ್ಸ್ ಪೆಕ್ಟರ್ ಅಖ್ತರ್ ಅಹ್ಮದ್ ಅನ್ಸಾರಿ ಮಾತನಾಡಿ, ಎರಡೂ ಕುಟುಂಬಗಳು ಬಾಲಕಿಯರೊಂದಿಗೆ ಠಾಣೆಗೆ ಬಂದಿದ್ದರು. ಅವರು ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೂ ಇಬ್ಬರು ಹುಡುಗಿಯರು ಒಳ್ಳೆಯ ಸ್ನೇಹಿತರಾಗಿದ್ದರು. ಈ ಹುಡುಗಿಯರು ಹೆಚ್ಚಾಗಿ ಒಬ್ಬರ ಮನೆಯಲ್ಲಿಯೇ ಇರುತ್ತಿದ್ದರು. ಪರಿಚಯಸ್ಥರಾದ್ದರಿಂದ ಇವರ ಕುಟುಂಬಗಳು ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ನಿಧಾನವಾಗಿ ಅವರ ಸ್ನೇಹ ಪ್ರೀತಿಗೆ ತಿರುಗಿದೆ. ಈ ಬಗ್ಗೆ ಪೋಷಕರಿಗೆ ತಿಳಿದಾಗ ಪೊಲೀಸ್ ಠಾಣೆಗೆ ಸಂಧಾನಕ್ಕೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಹುಡುಗಿಯರು ಮನಪರಿವರ್ತನೆ ಮಾಡಲು ಪ್ರಯತ್ನಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಈ ಹುಡುಗಿಯರು ತಾವು ವಯಸ್ಕರಾಗಿರುವುದರಿಂದ ನಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ ಎಂದು ಹೇಳಿದರು. ಹೀಗಾಗಿ ಈ ಹುಡುಗಿಯರಿಗೆ ಸಹಜೀವನ ನಡೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ತನ್ನ ಐದು ತಿಂಗಳ ಮಗುವಿನ ಕೈ ಕಾಲು ಮುರಿದ ತಂದೆ: ಆರೋಪಿ ಪತ್ರಕರ್ತ ಅಂದರ್