ನವದೆಹಲಿ: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಸಂಭಾವ್ಯ ಅಪಾಯ ಮತ್ತು ಪೊಲೀಸರ ಮೂಲಕ ಬೆದರಿಸುವ ತಂತ್ರದ ಕುರಿತು ಟ್ವಿಟರ್ ಆತಂಕ ವ್ಯಕ್ತಪಡಿಸಿ ಗುರುವಾರ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್‌ಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್ ನೀಡಿರುವ ಹೇಳಿಕೆ ನಿರಾಧಾರ, ತಪ್ಪು ಮತ್ತು ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ ಎಂದು ಕೇಂದ್ರ ಸರ್ಕಾರ ಗರಂ ಆಗಿಯೇ ಪ್ರತಿಕ್ರಿಯಿಸಿದೆ.
ಕೇಂದ್ರ ಸರ್ಕಾರ ಹೇಳಿದ್ದೇನು?
1. ಟ್ವಿಟರ್ ನೆಲದ ಕಾನೂನು ಗೌರವಿಸಬೇಕು
ಟ್ವಿಟರ್ ಹೇಳಿಕೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನವಾಗಿದೆ. ಟ್ವಿಟರ್ ತನ್ನ ಕಾರ್ಯಗಳು ಮತ್ತು ಉದ್ದೇಶಪೂರ್ವಕವಾಗಿ ಕೆಣಕುವ ಮೂಲಕ ಭಾರತದ ಕಾನೂನು ವ್ಯವಸ್ಥೆಯನ್ನು ಹಾಳುಮಾಡಲು ಯತ್ನಿಸುತ್ತದೆ. ಟ್ವಿಟರ್ ಈ ನೆಲದ ಕಾನೂನನ್ನು ಪಾಲಿಸಬೇಕು. ಕಾನೂನು ಮತ್ತು ನೀತಿ ನಿರೂಪಣೆ ಎಂಬುದು ಇಲ್ಲಿನ ಸಾರ್ವಭೌಮತ್ವದ ಪರಮಾಧಿಕಾರ. ಟ್ವಿಟರ್ ಒಂದು ಸಾಮಾಜಿಕ ಮಾಧ್ಯಮವಷ್ಟೇ. ಭಾರತದ ಕಾನೂನಿನ ಚೌಕಟ್ಟು ಹೇಗಿರಬೇಕು ಎಂದು ನಿರ್ಧರಿಸುವಲ್ಲಿ ಟ್ವಿಟರ್‌ಗೆ ಯಾವುದೇ ಪಾತ್ರವಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.
2. ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನ
ಟ್ವಿಟರ್ ನೀಡಿರುವ ದುರಾದೃಷ್ಟಕರ ಹೇಳಿಕೆಯನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಅದು ಸಂಪೂರ್ಣವಾಗಿ ನಿರಾಧಾರ, ಸುಳ್ಳು ಮತ್ತು ತಮ್ಮ ಸ್ವಂತ ದಡ್ಡತನವನ್ನು ಮರೆ ಮಾಚಲು ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನ. ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳು ಭಾರತದಲ್ಲಿ ಸದಾ ಸುರಕ್ಷಿತವಾಗಿರುತ್ತಾರೆ. ಅವರ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ ಎಂಬ ದೃಢ ಭರವಸೆ ನೀಡಲು ಬಯಸುತ್ತೇವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
3. ಮೊದಲು ದೇಶದ ಕಾನೂನು ಪಾಲಿಸಿ
ಇದಕ್ಕೂ ಮುನ್ನ, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಭಾವ್ಯ ಅಪಾಯ ಮತ್ತು ಪೊಲೀಸರ ಮೂಲಕ ಬೆದರಿಸುವ ತಂತ್ರದ ಬಗ್ಗೆ ಟ್ವಿಟರ್ ಆತಂಕ ವ್ಯಕ್ತಪಡಿಸಿತ್ತು. ತನ್ನ ಕಚೇರಿಗೆ ಪೊಲೀಸರ ಭೇಟಿ ಪ್ರಸ್ತಾಪಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತನ್ನ ಸಂಸ್ಥೆಯ ನೌಕರರ ಭದ್ರತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ, ಟೂಲ್ಕಿಟ್ ಪ್ರಕರಣದಲ್ಲಿ ನಮ್ಮ ಪೊಲೀಸರ ಕ್ರಮವನ್ನು ಬೆದರಿಕೆ ಅಂತಾ ಟ್ವಿಟರ್ ಹೇಳಿದೆ. ಟ್ವಿಟರ್ ಮೊದಲು ಈ ದೇಶದ ಕಾನೂನನ್ನು ಅನುಸರಿಸಲೇಬೇಕು ಎಂದು ಸ್ಪಷ್ಟಪಡಿಸಿದೆ.
4. ಲಡಾಕ್, ವ್ಯಾಕ್ಸಿನ್ ಸುಳ್ಳು ಸುದ್ದಿ ವಿಚಾರದಲ್ಲಿ ಕ್ರಮ ಕೈಗೊಳ್ಳದ ಟ್ವಿಟರ್
ಭಾರತ-ಚೀನಾ ನಡುವೆ ಶಾಂತಿ ಮಾತುಕತೆ ನಡೆಯುವ ಸಮಯದಲ್ಲಿ ಟ್ವಿಟರ್ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್ ಅನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಭಾಗವೆಂದು ತೋರಿಸಿತ್ತು. ಟ್ವಿಟರ್ನಲ್ಲಿ ವ್ಯಾಪಕವಾಗಿ ಕೊರೊನಾ ವ್ಯಾಕ್ಸಿನ್ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸಿದಾಗ ಟ್ವಿಟರ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಚಿವಾಲಯ ಹೇಳಿದೆ.
ಕಳೆದ ಫೆಬ್ರುವರಿ ತಿಂಗಳಲ್ಲಿ ಕೇಂದ್ರ ಸರ್ಕಾರವು ‘ಮಾಹಿತಿ ತಂತ್ರಜ್ಞಾನ ನಿಯಮಗಳು 2021’ ಪ್ರಕಟಿಸಿತ್ತು. ಡಿಜಿಟಲ್ ಸುದ್ದಿ ಮಾಧ್ಯಮಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಂನಂಥ ಒಟಿಟಿ ಸ್ಟ್ರೀಮಿಂಗ್ ಸೇವೆಗಳ ನಿಯಂತ್ರಣಕ್ಕೆ ಮೊದಲ ಬಾರಿಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಯಿತು.