ನವದೆಹಲಿ: 2019 ರಿಂದ ಈಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಒಂದೂ ಸೆಂಚುರಿ ಗಳಿಸಿಲ್ಲ. ಎಲ್ಲ ಬಗೆಯ ಕ್ರಿಕೆಟ್ನಲ್ಲಿ ಅವರು ದೀರ್ಘಾವಧಿಯಿಂದ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿಬಾರಿಯೂ ಅವರು ಕಡಿಮೆ ಸ್ಕೋರ್ಗೆ ಔಟಾದಾಗ ಅವರ ಕಳಪೆ ಫಾರ್ಮ್ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪುರುಷರ ವಿಶ್ವ ಟಿ20 ಪಂದ್ಯಾವಳಿಗೆ ಇನ್ನು ಕೇವಲ 3 ತಿಂಗಳು ಬಾಕಿ ಇರುವ ಈ ಸಮಯದಲ್ಲಿ ವಿರಾಟ್ ಫಾರ್ಮ್ ಬಗ್ಗೆ ಸಹಜವಾಗಿಯೇ ಚರ್ಚೆ ಜಾಸ್ತಿಯಾಗುತ್ತಿದೆ.
ಈ ಮಧ್ಯೆ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿದ್ದು, ಕೊಹ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಆಡಬಲ್ಲರು ಎಂದಿದ್ದಾರೆ.
"ಕಳೆದ ಐದಾರು ವರ್ಷಗಳಲ್ಲಿ ವಿರಾಟ್ ಇಲ್ಲದೆ ಭಾರತ ಆಡಿಯೇ ಇಲ್ಲ ಅಂತೇನಿಲ್ಲ. ಆದರೆ ಅಂಥ ಆಟಗಾರನೊಬ್ಬ ಉತ್ತಮ ಫಾರ್ಮ್ನೊಂದಿಗೆ ಮರಳಬೇಕೆಂಬುದು ನನ್ನ ಇಚ್ಛೆ. ಅವರನ್ನು ಹೊರಗಿಡಲಾಗಿದೆ ಅಥವಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೂ ಅವರಲ್ಲಿ ಇನ್ನೂ ಬಹಳಷ್ಟು ಕ್ರಿಕೆಟ್ ಬಾಕಿ ಇದೆ. ಅವರೇ ಅದನ್ನು ಹೊರತರುವ ದಾರಿಯನ್ನೂ ಹುಡುಕಿಕೊಳ್ಳಬೇಕಿದೆ." ಎಂದಿದ್ದಾರೆ ಕಪಿಲ್ ದೇವ್.
"ರಣಜಿ ಟ್ರೋಫಿಯಲ್ಲಿ ಅಥವಾ ಇನ್ನಾವುದೇ ಪಂದ್ಯದಲ್ಲಿ ರನ್ ಗಳಿಸಬಹುದು. ಒಟ್ಟಾರೆ ಆತನ ಆತ್ಮವಿಶ್ವಾಸ ಮರಳಬೇಕಿದೆ. ಶ್ರೇಷ್ಠ ಮತ್ತು ಉತ್ತಮ ಆಟಗಾರನ ನಡುವೆ ವ್ಯತ್ಯಾಸವಿದೆ. ಅವನಂಥ ಶ್ರೇಷ್ಠ ಆಟಗಾರನು ಫಾರ್ಮ್‌ಗೆ ಮರಳಲು ಹೆಚ್ಚು ಸಮಯ ತೆಗೆದುಕೊಳ್ಳಬಾರದು” ಎಂದು ಕಪಿಲ್ ಹೇಳಿದರು.
ಇಂಗ್ಲೆಂಡ್ ಪ್ರವಾಸದ ನಂತರ, ಕೊಹ್ಲಿ ಮೂರು ODI ಮತ್ತು ಐದು T20I ಗಳಿಗಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸುತ್ತಿಲ್ಲ. ಕೊಹ್ಲಿಯನ್ನು ಕೈಬಿಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಪಿಲ್, "ವಿರಾಟ್ ಕೊಹ್ಲಿಯಂತಹ ದೊಡ್ಡ ಆಟಗಾರನನ್ನು ಕೈಬಿಡಬೇಕು ಎಂದು ನಾನು ಹೇಳಲಾರೆ, ಅವರು ತುಂಬಾ ದೊಡ್ಡ ಆಟಗಾರ, ನೀವು ಅವರಿಗೆ ಗೌರವ ನೀಡಲು ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದ್ದರೆ ಅದೇನೂ ತಪ್ಪಲ್ಲ." ಎಂದು ಕಪಿಲ್ ದೇವ್ ತಿಳಿಸಿದ್ದಾರೆ.