ನವದೆಹಲಿ: ರಾಜ್ಯಗಳು, ವಿದ್ಯುತ್ ಕಂಪನಿಗಳು ಮತ್ತು ರೈಲ್ವೆಗಳಿಗೆ ಕಲ್ಲಿದ್ದಲಿನ ಬೇಡಿಕೆ ಪೂರೈಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಒಂದು ವಾರದಲ್ಲಿ ಕೇಂದ್ರವು ಕಲ್ಲಿದ್ದಲು ಉತ್ಪಾದನೆಯನ್ನು 1.94 ಮಿಲಿಯನ್ ಟನ್ನಿಂದ 2 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುತ್ತಿದೆ ಎಂಬ ಮಾಹಿತಿ ದೊರೆತಿದೆ.
ರಾಜ್ಯಗಳು ಮತ್ತು ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪ್ರತಿದಿನ ಪೂರೈಸುತ್ತಿರುವ ಕಲ್ಲಿದ್ದಲಿನ ಪ್ರಮಾಣದಲ್ಲಿ ಯಾವುದೇ ಕೊರತೆಯಾಗಿಲ್ಲ. ನಮ್ಮ ಬಳಿ ಐದು ದಿನಗಳಿಗೆ ಬೇಕಾಗುವ ದಾಸ್ತಾನಿದೆ. ಒಂದು ತಿಂಗಳಲ್ಲಿ ಕಲ್ಲಿದ್ದಲು ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಮೂಲಗಳು ಮಾಹಿತಿ ನೀಡಿವೆ.
'ರಾಜ್ಯಗಳ ನಿರ್ಲಕ್ಷ್ಯವೇ ಕಾರಣ'
ಈ ವರ್ಷದ ಜನವರಿ ತಿಂಗಳಿಂದ ಕೇಂದ್ರ ಕಲ್ಲಿದ್ದಲು ಸಚಿವಾಲಯ ವಿವಿಧ ರಾಜ್ಯಗಳಿಗೆ ಕಲ್ಲಿದ್ದಲು ದಾಸ್ತಾನು ಮಾಡಲು ಸತತವಾಗಿ ಪತ್ರ ಬರೆಯುತ್ತಿತ್ತು. ಆದರೆ ಈ ಬಗ್ಗೆ ಯಾರೂ ಗಮನ ಕೊಡಲಿಲ್ಲ. ಇದೂ ಕೂಡಾ ಕಲ್ಲಿದ್ದಲು ಕೊರತೆಗೆ ಕಾರಣ ಎನ್ನಲಾಗುತ್ತಿದೆ. ಕೋಲ್ ಇಂಡಿಯಾ ಕೂಡಾ ಒಂದು ಮಿತಿಯಲ್ಲಿ ಕಲ್ಲಿದ್ದಲು ಸಂಗ್ರಹ ಮಾಡಬಹುದು. ಆದರೆ ಆ ಮಿತಿಗಿಂತ ಹೆಚ್ಚು ಕಲ್ಲಿದ್ದಲು ಸಂಗ್ರಹ ಮಾಡಿದರೆ ಬೆಂಕಿ ತಗುಲುವ ಅಪಾಯ ಇದ್ದೇ ಇರುತ್ತದೆ. ಆದ್ದರಿಂದ ಕೋಲ್ ಇಂಡಿಯಾದಲ್ಲೂ ಕಡಿಮೆ ಮಿತಿ ಇಂದು ತಿಳಿದುಬಂದಿದೆ.
ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹೇರಳವಾಗಿ ಕಲ್ಲಿದ್ದಲು ಗಣಿಗಳಿದ್ದರೂ, ಕಲ್ಲಿದ್ದಲನ್ನು ಹೊರತೆಗೆಯಲು ಮುಂದಾಗಲಿಲ್ಲ. ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ, ಕೋವಿಡ್ ಮುಂತಾದ ಕಾರಣದಿಂದ ಕಲ್ಲಿದ್ದಲು ಗಣಿಗಾರಿಕೆ ಮಾಡಿಲ್ಲ. ಸುದೀರ್ಘ ಮುಂಗಾರು ಕೂಡಾ ಗಣಿಗಾರಿಕೆಯ ಮೇಲೆ ಪರಿಣಾಮ ಬೀರಿತು. ಇದೇ ಕಾರಣದಿಂದ ಕಲ್ಲಿದ್ದಲು ಬೆಲೆಗಳೂ ಏರಿಕೆಯಾಗಿವೆ. ಪ್ರಸ್ತುತ ವಿದೇಶದಿಂದ ಆಮದು ಕೂಡಾ ಕಡಿಮೆ ಪ್ರಮಾಣದಲ್ಲಿದೆ. ವಿದೇಶದಿಂದ ಕಲ್ಲಿದ್ದಲು ಆಮದು ಪ್ರಮಾಣ ಶೇಕಡಾ 12ರಷ್ಟು ಕುಸಿತ ಕಂಡಿದೆ.
ಕರ್ನಾಟಕವೂ ಬಾಕಿ ಉಳಿಸಿಕೊಂಡ ರಾಜ್ಯ
ಕೆಲವು ರಾಜ್ಯಗಳು ಕೋಲ್ ಇಂಡಿಯಾದೊಂದಿಗೆ ಬೃಹತ್ ಮೊತ್ತದ ಬಾಕಿಯನ್ನು ಹೊಂದಿವೆ. ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಅತಿ ದೊಡ್ಡ ಬಾಕಿ ಉಳಿಸಿಕೊಂಡಿವೆ. ಈ ಎಲ್ಲಾ ರಾಜ್ಯಗಳು ಸುಮಾರು 20 ಸಾವಿರ ಕೋಟಿ ರೂಪಾಯಿಯನ್ನು ಕೋಲ್ ಇಂಡಿಯಾಗೆ ಪಾವತಿ ಮಾಡಬೇಕಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇಷ್ಟು ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡರೂ ಕೋಲ್ ಇಂಡಿಯಾ ಕಲ್ಲಿದ್ದಲು ಪೂರೈಕೆ ಮಾಡುತ್ತಿದೆ. ಹಳ್ಳಿಗಳನ್ನು ವಿದ್ಯುದ್ದೀಕರಣ ಮಾಡುವ ಪ್ರಕ್ರಿಯೆ ಮತ್ತು ಕೈಗಾರೀಕರಣವು ಕಲ್ಲಿದ್ದಲಿನ ಬೇಡಿಕೆಯನ್ನು ಹೆಚ್ಚಿಸಿವೆ. ಇದರ ಜೊತೆಗೆ ಪಂಜಾಬ್ನಲ್ಲಿರುವ ರೋಪಾರ್ ಮತ್ತು ಭಟಿಂಡಾದಲ್ಲಿ ಕಲ್ಲಿದ್ದಲು ಗಣಿಗಳನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಲ್ಲಿದ್ದಲು ಸಂಗ್ರಹದಲ್ಲಿ ಎಡವಿಲ್ಲ, ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡಲ್ಲ : ಸಿಎಂ ಬೊಮ್ಮಾಯಿ