ಅಮರಾವತಿ(ಆಂಧ್ರಪ್ರದೇಶ):ತೆಲುಗು ದೇಶಂ ಪಕ್ಷದ ಸದಸ್ಯರು ಇಂದು ರಾಜ್ಯಾದ್ಯಂತ ಬೀದಿಗಿಳಿದು ಟಿಡಿಪಿ ಕಾರ್ಯಕರ್ತರು ಹಾಗೂ ನಾಯಕರು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ತಮ್ಮ ಕಚೇರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಕುರಿತು ತೀವ್ರ ಆಕ್ರೋಶ ಹೊರಹಾಕಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ದಾಳಿಯನ್ನು ಖಂಡಿಸಿ ಇಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದಾರೆ. ಈ ದಾಳಿಯ ಹಿಂದೆ ಮುಖ್ಯಮಂತ್ರಿ ವೈ ಎಸ್ ಜಗನ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕೈವಾಡವಿದೆ ಎಂದು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷದ ಕಚೇರಿ ಮೇಲೆ ದಾಳಿ ನಡೆದಿರುವ ಮಾಹಿತಿ ಪಡೆದ ನಂತರ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮಂಗಳಗಿರಿಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಟಿಡಿಪಿ ಕಚೇರಿ ಮಾತ್ರವಲ್ಲದೇ ಪಕ್ಷದ ನಾಯಕ ಪಟ್ಟಾಭಿ ರಾಮ್ ಅವರ ಮನೆಯ ಮೇಲೂ ದಾಳಿ ನಡೆದಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ರಾಜ್ಯ ಗವರ್ನರ್ ಬಿಶ್ವಭೂಷಣ್ ಹರಿಚಂದನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದಾರೆ. ಕೇಂದ್ರವು ಪ್ರಜಾಪ್ರಭುತ್ವವನ್ನು ಉಳಿಸುವ ಕ್ರಮಗಳನ್ನು ಅನುಸರಿಸಬೇಕು ಮತ್ತು ಗಾಂಜಾ ಮಾಫಿಯಾ (ರಾಜ್ಯದಲ್ಲಿ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ.
ಮಂಗಳಗಿರಿಯಲ್ಲಿರುವ ಪ್ರಧಾನ ಕಚೇರಿ ಸೇರಿದಂತೆ ಟಿಡಿಪಿ ಕಚೇರಿಗಳ ಮೇಲೆ ಮಂಗಳವಾರ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಟಿಡಿಪಿ ವಕ್ತಾರ ಕೆ ಪಟ್ಟಾಭಿ ರಾಮ್ ಅವರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮಾಜಿ ಸಚಿವ ನಕ್ಕಾ ಆನಂದ ಬಾಬು ಅವರಿಗೆ ಪೊಲೀಸ್ ನೋಟಿಸ್ ನೀಡಿದ್ದನ್ನು ಖಂಡಿಸಿದರು.
''ವೈಎಸ್‌ಆರ್‌ಸಿಪಿ ಗೂಂಡಾಗಳು ಪಕ್ಷದ ಪ್ರಧಾನ ಕಚೇರಿ ಮತ್ತು ವಿಶಾಖಪಟ್ಟಣಂನ ಕಚೇರಿ ಮತ್ತು ಪಕ್ಷದ ನಾಯಕರ ನಿವಾಸಗಳ ಮೇಲೆ ನಡೆಸಿದ ದಾಳಿಯನ್ನು ತೆಲುಗು ದೇಶಂ ಪಕ್ಷವು ಬಲವಾಗಿ ಖಂಡಿಸುತ್ತದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಸಿಸುತ್ತಿದ್ದೇವೆಯೋ ಅಥವಾ ಫ್ಯಾಸಿಸ್ಟ್ ರಾಷ್ಟ್ರದಲ್ಲಿದ್ದೇವೆಯೋ ಎಂದು ನಮಗೆ ಅರ್ಥವಾಗುತ್ತಿಲ್ಲ. ಈ ದಾಳಿಯ ಹೊಣೆಯನ್ನು ಮುಖ್ಯಮಂತ್ರಿ ಮತ್ತು ಡಿಜಿಪಿ ಹೊತ್ತುಕೊಳ್ಳಬೇಕು'' ಎಂದು ಆಂಧ್ರಪ್ರದೇಶ ಟಿಡಿಪಿ ಅಧ್ಯಕ್ಷ ಅಚ್ಚಣ್ಣಾಯ್ಡು ಆಗ್ರಹಿಸಿದ್ದಾರೆ.