ಮೊಹಾಲಿ(ಪಂಜಾಬ್): ಪಂಜಾಬ್ನಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವಲ್ಲಿ ಯಶಸ್ವಿಯಾಗಿರುವ ಆಮ್ ಆದ್ಮಿ ಪಕ್ಷ ಮಾರ್ಚ್ 16ರಂದು ಸರ್ಕಾರ ರಚನೆ ಮಾಡಲಿದೆ. ಆಪ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಭಗವಂತ್ ಮನ್, ನೂತನ ಶಾಸಕರಿಗೆ ಮಹತ್ವದ ಸಲಹೆ ನೀಡಿದ್ದಾರೆ.
ಮೊಹಾಲಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಹಂಕಾರಕ್ಕೊಳಗಾಗಬೇಡಿ, ನಮಗೆ ಮತ ನೀಡದವರನ್ನೂ ನಾವು ಗೌರವಿಸಬೇಕು. ಚಂಡೀಗಢದಲ್ಲಿ ಕಾಲ ಕಳೆಯುವ ಬದಲಿಗೆ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಉಳಿದುಕೊಂಡು ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಕ್ಯಾಬಿನೆಟ್ ಸ್ಥಾನಕ್ಕಾಗಿ ಹಾತೊರೆಯಬೇಡಿ ಎಂದು ಬುದ್ಧಿವಾದ ಹೇಳಿರುವ ಭಗವಂತ್ ಮನ್, ನಾವು ಮತ ಕೇಳಲು ಹೋದ ಸ್ಥಳಗಳಲ್ಲಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಹೊರತುಪಡಿಸಿ 17 ಮಂದಿ ಕ್ಯಾಬಿನೆಟ್ ಸಚಿವರನ್ನು ಹೊಂದಬಹುದು. ಯಾರೂ ಅಸಮಾಧಾನಗೊಳ್ಳಬೇಕಾಗಿಲ್ಲ. ನೀವೆಲ್ಲರೂ ನಮ್ಮ ಕ್ಯಾಬಿನೆಟ್ ಮಂತ್ರಿಗಳೇ ಎಂದರು.
117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 92 ಸ್ಥಾನಗಳಿಸಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ 58 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಮಾರ್ಚ್ 16ರಂದು ಪಂಜಾಬ್ ನೂತನ ಸಿಎಂ ಆಗಿ ಮನ್ ಅಧಿಕಾರ ಸ್ವೀಕಾರ ಮಾಡಲಿದ್ದು, ಅದಕ್ಕೂ ಮುಂಚಿತವಾಗಿ ಮಾರ್ಚ್ 13ರಂದು ಬೃಹತ್ ರೋಡ್ ಶೋ ನಡೆಸಲಿದ್ದಾರೆ.