ತಿರುವನಂತಪುರಂ(ಕೇರಳ): ಅಮಾನುಷ ನರಬಲಿ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಹತ್ಯೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಕೇರಳ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಆದೇಶ ಹೊರಡಿಸಿದ್ದಾರೆ. ಕೊಚ್ಚಿ ನಗರ ಉಪ ಪೊಲೀಸ್ ಆಯುಕ್ತ ಎಸ್ ಶಶಿಧರನ್ ಅವರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿದ್ದಾರೆ. ಪೆರುಂಬವೂರು ಎಎಸ್ಪಿ ಅನುಜ್ ಪಲಿವಾಲ್ ಮುಖ್ಯ ತನಿಖಾಧಿಕಾರಿಯಾಗಿರುತ್ತಾರೆ ಎಂದು ಹಿರಿಯ ಅಧಿಕಾರಿ ಅನಿಲ್ ಕಾಂತ್ ತಿಳಿಸಿದ್ದಾರೆ.
ಎರ್ನಾಕುಲಂ ಕೇಂದ್ರ ಸಹಾಯಕ ಕಮಿಷನರ್ ಸಿ ಜಯಕುಮಾರ್, ಕಡವಂತರ ಠಾಣಾಧಿಕಾರಿ ಬೈಜು ಜೋಸ್, ಕಾಲಡಿ ಠಾಣಾಧಿಕಾರಿ ಅನುಪ್ ಎನ್ಎ ತನಿಖಾಧಿಕಾರಿಗಳಾಗಿದ್ದು, ಎಲಮಕರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಐನೆ ಬಾಬು ಮತ್ತು ಕಾಲಡಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಬಿಪಿನ್ ಟಿಬಿ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇಲಾಖೆ ಎಡಿಜಿಪಿ ಕಾನೂನು ಸುವ್ಯವಸ್ಥೆಯ ನೇರ ನಿಗಾದಲ್ಲಿ ತನಿಖಾ ತಂಡ ಕಾರ್ಯನಿರ್ವಹಿಸಲಿದೆ. ಬುಧವಾರ ನರಬಲಿ ಪ್ರಕರಣದಲ್ಲಿ ಪೊಲೀಸರ ರಿಮಾಂಡ್ ವರದಿಯಲ್ಲಿ ಆಘಾತಕಾರಿ ವಿಷಯ ಹೊರಬಿದ್ದಿದೆ. ವರದಿಯ ಪ್ರಕಾರ, ನರಬಲಿ ಪ್ರಕರಣದ ಆರೋಪಿಗಳು ಸಂತ್ರಸ್ತ ಮಹಿಳೆಯೊಬ್ಬರನ್ನು 56 ತುಂಡುಗಳಾಗಿ ಕತ್ತರಿಸಿದ್ದಾರೆ. ಆರೋಪಿ ಮುಹಮ್ಮದ್ ಶಫಿ ಮತ್ತು ಮಹಿಳೆ ಆರೋಪಿ ಲೈಲಾ ಸಂತ್ರಸ್ತರ ಗುಪ್ತಾಂಗದೊಳಗೆ ಚಾಕು ಹಾಕಿದ್ದಾರೆ ಎಂದು ರಿಮಾಂಡ್ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ.. ಆರ್ಥಿಕ ಸಮೃದ್ಧಿಯನ್ನು ಪಡೆಯಲು ಇಬ್ಬರು ಆರೋಪಿಗಳಾದ ಭಗವಲ್ ಸಿಂಗ್ ಮತ್ತು ಲೈಲಾ ಪ್ರಮುಖ ಆರೋಪಿ ಮುಹಮ್ಮದ್ ಶಫಿಯ ಸಹಾಯದಿಂದ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. 26-09-2022 ರಂದು ಶಫಿ ಅವರು ಕೊಚ್ಚಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ 52 ವರ್ಷದ ಪದ್ಮಾ ಅವರನ್ನು ಸಂಪರ್ಕಿಸಿದ್ದರು. ಶಫಿ ಲೈಂಗಿಕ ಕೆಲಸಕ್ಕೆ ರೂ 15,000 ನೀಡುವ ಮೂಲಕ ಆಕೆಗೆ ಆಮಿಷವೊಡ್ಡಿದ್ದರು. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿ ಶಫಿಯೊಂದಿಗೆ ಭಗವಲ್ ಸಿಂಗ್ ಮನೆಗೆ ಹೋದರು. ಪತ್ತನಂತಿಟ್ಟ ಜಿಲ್ಲೆಯ ಲೈಲಾ ಎಂಬುವರು ಅಲ್ಲಿ ಮಹಿಳೆಯ ಕುತ್ತಿಗೆಗೆ ಪ್ಲಾಸ್ಟಿಕ್ ದಾರದಿಂದ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಶಫಿಯು ಪದ್ಮಾರ ಖಾಸಗಿ ಅಂಗದೊಳಗೆ ಚಾಕು ಇಟ್ಟು, ಬಳಿಕ ಅವರ ಕತ್ತು ಕೊಯ್ದು ಕೊಲೆಗೈದಿದ್ದಾರೆ. ಅಲ್ಲದೆ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ ಬಕೆಟ್‌ಗಳಲ್ಲಿ ಹಾಕಿ ನಂತರ ಹಳ್ಳದಲ್ಲಿ ಹೂತುಹಾಕಿದರು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.
ಜೂನ್ ತಿಂಗಳಲ್ಲೂ ನಡೆದಿತ್ತು ಕೃತ್ಯ.. ಈ ವರ್ಷದ ಜೂನ್‌ನಲ್ಲಿ ಮತ್ತೊಂದು ಘಟನೆ ನಡೆದಿತ್ತು. ಆರೋಪಿ ಶಫಿ ಕೊಟ್ಟಾಯಂ ಜಿಲ್ಲೆಯ ರೋಸ್ಲಿನ್ ಎಂಬ ಮಹಿಳೆಯನ್ನು ಸಂಪರ್ಕಿಸಿ ಬ್ಲೂ ಫಿಲ್ಮ್ನಲ್ಲಿ ನಟಿಸಲು 10 ಲಕ್ಷ ರೂಪಾಯಿ ಆಮಿಷವೊಡ್ಡಿದ್ದ. ಆಕೆ ಅದಕ್ಕೆ ಒಪ್ಪಿ ದಂಪತಿಯ ಮನೆ ಇದ್ದ ಜಾಗಕ್ಕೆ ಹೋಗಿದ್ದರು. ಅಲ್ಲಿ ಮಹಿಳೆಯ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಹಾಕಿದ್ದರು. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆರೋಪಿ ಮಹಿಳೆ ಲೈಲಾ ಬಲಿಪಶುವಿನ ಯೋನಿಯೊಳಗೆ ಚಾಕುವನ್ನಿಟ್ಟು, ನಂತರ ಕತ್ತು ಕತ್ತರಿಸಿದ್ದಾರೆ. ಎರಡನೇ ಆರೋಪಿ ಭಗವಲ್ ಸಿಂಗ್ ಸಂತ್ರಸ್ತೆಯ ಎದೆಯನ್ನು ಕತ್ತರಿಸಿ ಇಟ್ಟುಕೊಂಡಿದ್ದನಂತೆ. ಬಳಿಕ ಮೂವರು ಆರೋಪಿಗಳು ಒಟ್ಟಾಗಿ ಆ ಮಹಿಳೆಯನ್ನು ತುಂಡುಗಳಾಗಿ ಕತ್ತರಿಸಿ ಗುಂಡಿಯಲ್ಲಿ ಹೂತು ಹಾಕಿದ್ದರು ಎಂಬ ಭಯಾನಕ ಸಂಗತಿ ತಿಳಿದುಬಂದಿದೆ.
ಕೇರಳದಲ್ಲಿ ಆಪಾದಿತ ನರಬಲಿ ಪ್ರಕರಣ ಮುನ್ನೆಲೆಗೆ ಬಂದ ಒಂದು ದಿನ ಮುನ್ನ ಆರೋಪಿಗಳು ಬಲಿಪಶುಗಳ ಮಾಂಸವನ್ನು ತಿಂದಿದ್ದಾರೆ ಎಂದು ಕೇರಳ ಪೊಲೀಸರು ಬಹಿರಂಗಪಡಿಸಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೊಚ್ಚಿ ಕಮಿಷನರ್ ಸಿ ಎಚ್ ನಾಗರಾಜು, ಪ್ರಮುಖ ಆರೋಪಿ ಶಫಿ ವಿಕೃತ ಕಾಮಿಯಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಮೂವರು ಮಹಿಳೆಯನ್ನು ಆಮಿಷವೊಡ್ಡಿ ನರಬಲಿ ರೂಪದಲ್ಲಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ಈ ವಿಚಾರ ಮುನ್ನೆಲೆಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಈ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಶಫಿ ಮತ್ತು ಭಗವಲ್ ಸಿಂಗ್ ಹಾಗು ಲೈಲಾ. ಭಗವಲ್ ಸಿಂಗ್ ಮತ್ತು ಲೈಲಾ ದಂಪತಿ ಎಂದು ತಿಳಿದುಬಂದಿದೆ. ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬುಧವಾರ ಎಲ್ಲಾ ಮೂವರು ಆರೋಪಿಗಳನ್ನು 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಮುಖ ಆರೋಪಿಯಿಂದ ಲೈಂಗಿಕ ಶೋಷಣೆ ನಡೆದಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಓದಿ: ಕೇರಳ ನರಬಲಿ ಕೇಸ್: ಶವ ತುಂಡರಿಸಿ ಬೇಯಿಸಿ ತಿಂದರು.. ಸ್ಫೋಟಕ ಮಾಹಿತಿ ಬಯಲು