ಚಂದೀಗಢ: ಜನತೆಯಲ್ಲಿ ಲಸಿಕೆ ಪಡೆಯುವ ಹಿಂಜರಿಕೆಯ ಭಾವನೆಯನ್ನು ಹೋಗಲಾಡಿಸಲು ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಶೇ 100ರಷ್ಟು ಲಸಿಕಾಕರಣ ಸಾಧಿಸುವ ಗ್ರಾಮಗಳಿಗೆ ತಲಾ 10 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ಕೋವಿಡ್ ಹೋರಾಟದಲ್ಲಿ ಪಂಚರು ಹಾಗೂ ಸರಪಂಚರು ಮುಂಚೂಣಿಯಲ್ಲಿ ನಿಲ್ಲಬೇಕೆಂದು ಕರೆ ನೀಡಿರುವ ಸಿಎಂ, ಜನತೆ ಕೋವಿಡ್ ಪರೀಕ್ಷೆಗೊಳಗಾಗುವಂತೆ ಹಾಗೂ ಲಸಿಕೆ ಪಡೆಯಲು ಮುಂದಾಗುವಂತೆ ಅವರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡಿದ್ದಾರೆ.
ರಾಜ್ಯದ ಸುಮಾರು 2 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳ ಮುಖ್ಯಸ್ಥರು ಹಾಗೂ ಸದಸ್ಯರೊಂದಿಗೆ ವರ್ಚುವಲ್ ಸಂವಾದ ನಡೆಸಿದ ಅಮರಿಂದರ್ ಸಿಂಗ್, ಕೋವಿಡ್ ಸೋಂಕನ್ನು ಬೇಗನೆ ಪತ್ತೆ ಮಾಡಲು ಹಾಗೂ ಅದಕ್ಕೆ ಚಿಕಿತ್ಸೆ ಪಡೆಯಲು ಪ್ರಯತ್ನಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿಗಳು ವಿಶೇಷ ವೈದ್ಯಕೀಯ ಶಿಬಿರಗಳನ್ನು ಏರ್ಪಾಟು ಮಾಡಿ, ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಇದಕ್ಕಾಗಿ ನಿವೃತ್ತ ಯೋಧರ ಸಹಾಯ ಪಡೆಯಬೇಕೆಂದು ಕೇಳಿಕೊಂಡರು.