ಶಹಜಹಾನ್‌ಪುರ (ಉತ್ತರ ಪ್ರದೇಶ): ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ರಾಜಸ್ಥಾನದ ಸಚಿನ್ ಮೀನಾರನ್ನು ವಿವಾಹವಾದ ಬಳಿಕ, ವಿದೇಶಗಳಿಂದ ಬಂದು ಭಾರತದ ಯುವಕರೊಂದಿಗೆ ವಿವಾಹವಾಗುವ ಪ್ರಕರಣಗಳು ಹೆಚ್ಚಾಗಿವೆ. ಈಗ ಅಂಥದ್ದೇ ಮತ್ತೊಂದು ಕೇಸ್ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಯುವತಿ ಬಂದಿದ್ದು ದಕ್ಷಿಣ ಕೊರಿಯಾದಿಂದ. ಪಂಜಾಬಿ ಮೂಲದ ಯುವಕನ ಜೊತೆ ಹಸೆಮಣೆ ಏರಿದ್ದಾರೆ.
ಉತ್ತರ ಪ್ರದೇಶದ ಶಹಜಹಾನ್‌ಪುರದ ನಿವಾಸಿ ಸುಖ್‌ಜಿತ್ ಸಿಂಗ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಬೋಹ್ ನಿ ವಿವಾಹವಾದ ಜೋಡಿ. ಈಕೆ ತಾನು ಪ್ರೀತಿಸಿದ ಯುವಕನಿಗಾಗಿ ದೂರದ ಕೊರಿಯಾದಿಂದ 3 ತಿಂಗಳ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಹಾರಿ ಬಂದಿದ್ದಾರೆ. ಪಂಜಾಬಿ ಪದ್ಧತಿಯಂತೆ ಇಬ್ಬರೂ ಮದುವೆಯಾಗಿದ್ದು, ಪ್ರಸ್ತುತ ಶಹಜಹಾನ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದಾರೆ.
ಕಾಫಿ ಶಾಪಲ್ಲಿ ಮೊಳೆತ ಪ್ರೀತಿ: ಯುವಕ ಸುಖ್‌ಜಿತ್ ಸಿಂಗ್ 4 ವರ್ಷಗಳ ಹಿಂದೆ ಉದ್ಯೋಗ ಅರಸಿ ದಕ್ಷಿಣ ಕೊರಿಯಾಕ್ಕೆ ತೆರಳಿದ್ದರು. ಬುಸಾನ್ ನಗರದ ಕಾಫಿ ಶಾಪ್‌ನಲ್ಲಿ ಬಿಲ್ಲಿಂಗ್ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಆಗ 23 ವರ್ಷದ ಕಿಮ್ ಬೋಹ್ ನಿ ಅವರ ಪರಿಚಯವಾಗಿದೆ. ಕಿಮ್ ಅದೇ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ.
ಇದಾದ ಬಳಿಕ ಸುಖಜಿತ್ 6 ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದರು. ಬಳಿಕವೂ ಸಂಪರ್ಕದಲ್ಲಿದ್ದ ಇಬ್ಬರೂ, ವಿವಾಹವಾಗಲು ಒಪ್ಪಿಕೊಂಡಿದ್ದಾರೆ. ದೂರದ ದಕ್ಷಿಣ ಕೊರಿಯಾದಿಂದ ಕಿಮ್ ಭಾರತಕ್ಕೆ ಒಂದೂವರೆ ತಿಂಗಳ ಹಿಂದೆ ಬಂದಿದ್ದಾರೆ. ಬಳಿಕ ದೆಹಲಿಯಲ್ಲಿನ ತನ್ನ ಗೆಳತಿಯ ಸಹಾಯದಿಂದ ಉತ್ತರಪ್ರದೇಶದ ತನ್ನ ಗೆಳೆಯನನ್ನು ಹುಡುಕಿಕೊಂಡು ತೆರಳಿದ್ದಾರೆ.
ಗುರುದ್ವಾರದಲ್ಲಿ ವಿವಾಹ ಬಂಧನ: ಮನೆಗೆ ಬಂದ ಕಿಮ್‌ನನ್ನು ಕಂಡು ಸುಖಜಿತ್‌ಗೆ ಅತೀವ ಸಂತೋಷವಾಗಿದೆ. ಎರಡು ದಿನಗಳ ಹಿಂದೆ ಸುಖಜಿತ್ ತನ್ನ ಕೊರಿಯನ್ ಗೆಳತಿಯನ್ನು ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಸದ್ಯ ಕಿಮ್ ಸುಖಜಿತ್ ದಂಪತಿ ಫಾರ್ಮ್ ಹೌಸ್ನಲ್ಲಿ ತಂಗಿದ್ದಾರೆ. ಕಿಮ್ ಭಾರತೀಯ ಪದ್ಧತಿಯನ್ನು ತುಂಬಾ ಇಷ್ಟಪಡುತ್ತಾರೆ. ಬಳೆಗಳು ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಸುಖಜಿತ್ ಹೇಳಿದ್ದಾರೆ.
ಕಿಮ್ ಜೊತೆ ದಕ್ಷಿಣ ಕೊರಿಯಾದಲ್ಲಿ ನೆಲೆಯೂರಲು ಬಯಸುವುದಾಗಿ ಹೇಳಿದ ಸುಖಜಿತ್, ದಕ್ಷಿಣ ಕೊರಿಯಾದಲ್ಲಿ ಇದ್ದಾಗ ಕಿಮ್ ಜೊತೆ ನಿತ್ಯ ಸಂಭಾಷಣೆ ನಡೆಸಿ ಸ್ಥಳೀಯ ಭಾಷೆಯನ್ನು ಕಲಿತುಕೊಂಡೆ ಬಳಿಕ ಇಬ್ಬರೂ ಪ್ರೀತಿಸಲು ಆರಂಭಿಸಿದೆವು ಎಂದು ಹೇಳಿದರು. ಇನ್ನೂ ತನ್ನ ಗೆಳೆಯ ಸುಖ್ಜಿತ್ನನ್ನು ಪ್ರೀತಿಸುತ್ತೇನೆ. ಭಾರತವನ್ನು ಪ್ರೀತಿಸುವೆ. ಇಲ್ಲಿಯ ಸಂಪ್ರದಾಯ, ಆಚರಣೆ ಎಲ್ಲವೂ ಇಷ್ಟ ಎಂದು ಯುವತಿ ಕಿಮ್ ಕೂಡ ಹೇಳಿದ್ದಾರೆ.
ಭಾರತದಲ್ಲೇ ಉಳಿಯಲು ಬಯಸುವೆ: ಮುಂದಿನ ತಿಂಗಳು ಕಿಮ್ ದಕ್ಷಿಣ ಕೊರಿಯಾಕ್ಕೆ ಮರಳಲಿದ್ದು, ಮೂರು ತಿಂಗಳ ನಂತರ ಸುಖ್‌ಜಿತ್ ಅಲ್ಲಿಗೆ ಹೋಗಲಿದ್ದಾರೆ. ಸೊಸೆ ಭಾರತದಲ್ಲಿಯೇ ಇರಬೇಕೆಂಬುದು ನನ್ನ ಬಯಕೆ. ಇದು ಅವರ ಜೀವನ. ಅವರು ಎಲ್ಲಿ ವಾಸಿಸಿದರೂ ಸಂತೋಷವಾಗಿರಬೇಕು ಎಂದು ಸುಖ್‌ಜಿತ್‌ರ ತಾಯಿ ಹರ್ಜಿಂದರ್ ಕೌರ್ ಹೇಳುತ್ತಾರೆ.
ಇದನ್ನೂ ಓದಿ: Seema Haider: ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ಳಿಂದ 'ಪಾಕಿಸ್ತಾನ ಮುರ್ದಾಬಾದ್' ಘೋಷಣೆ