ಜೋಹಾನ್ಸ್‌ಬರ್ಗ್ : ಕೋವಿಡ್-19 ವೈರಸ್‌ನ ಹೊಸ ರೂಪಾಂತರದ ನಡುವೆ, ದಕ್ಷಿಣ ಆಫ್ರಿಕಾದಲ್ಲಿ ಕೆಲ ಹಿಂದೂ ಪುರೋಹಿತರು ಕೊರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಸಲು ಹೆಚ್ಚಿನ ದರ ವಿಧಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂತ್ಯಕ್ರಿಯೆ ನಡೆಸಲು 1,200 ರಾಂಡ್ (ಯುಎಸ್ಡಿ 79) ನಿಂದ 2,000 ರಾಂಡ್ (ಯುಎಸ್ಡಿ 131) ವರೆಗೆ ಶುಲ್ಕ ವಿಧಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಹಿಂದೂ ಧರ್ಮ ಸಂಘದ ಸದಸ್ಯ ಮತ್ತು ಡರ್ಬನ್ ಕ್ಲೇರ್ ಎಸ್ಟೇಟ್ ಶವಾಗಾರದ ವ್ಯವಸ್ಥಾಪಕ ಪ್ರದೀಪ್ ರಾಮ್ಲಾಲ್ ತಿಳಿಸಿದರು.
ನಮ್ಮ ಧರ್ಮಗ್ರಂಥಗಳ ಪ್ರಕಾರ ಇದು ಸಮುದಾಯಕ್ಕೆ ಕೊಡುವ ನಮ್ಮ ಸೇವೆ. ಒಂದು ಕುಟುಂಬವು ಅರ್ಚಕರಿಗೆ ದೇಣಿಗೆ ನೀಡಲು ಬಯಸಿದರೆ ಅದು ಸ್ವೀಕಾರಾರ್ಹ. ಆದರೆ, ಪುರೋಹಿತರು ಜನರಿಗೆ ಶುಲ್ಕ ವಿಧಿಸಬಾರದು ಎಂದು ತಿಳಿಸಿದರು.
ಸೋಂಕಿಗೆ ಬಲಿಯಾದ ವ್ಯಕ್ತಿಯ ಸಂಬಂಧಿಕರಿಂದ ಸಂಸ್ಥೆಗೆ ಹಲವಾರು ದೂರುಗಳು ಬಂದಿವೆ ಎಂದು ರಾಮ್‌ಲಾಲ್ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವೈರಸ್‌ನ ಹೊಸ ರೂಪಾಂತರದ ದೃಷ್ಟಿಯಿಂದ, ಭಾರತೀಯ ಮೂಲದವರು ಹೆಚ್ಚು ವಾಸಿಸುವ ನಗರದಲ್ಲಿ ಎರಡು ಬದಲಾವಣೆಗಳನ್ನು ಸ್ಮಶಾನದಲ್ಲಿ ಪರಿಚಯಿಸಬೇಕಾಗಿತ್ತು ಎಂದರು.
ಒಂದು ದಿನ ನಾನು ನನ್ನ ವಾಹನದಲ್ಲಿದ್ದೆ. ಆಗ ಪಾದ್ರಿ ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಿದ್ದರು. ಹಣದ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು, ವೈಯಕ್ತಿಕವಾಗಿ ಸಾಕ್ಷಿಯಾದ ಘಟನೆಯನ್ನು ರಾಮ್ಲಾಲ್ ವಿವರಿಸಿದ್ದಾರೆ.
ಅನೇಕ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿರುವ ಈ ಸಂದರ್ಭದಲ್ಲಿ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಅವರು ಸಮುದಾಯಕ್ಕೆ ಕರೆ ನೀಡಿದರು. ಅಲ್ಲದೇ ಶವಸಂಸ್ಕಾರವನ್ನು ಸ್ವತಃ ನಡೆಸುವಂತೆ ಹೇಳಿದರು.
ಅಂತ್ಯ ಸಂಸ್ಕಾರದ ಸಮಯದಲ್ಲಿ ಪಾದ್ರಿ ಬೇಕೆಂದು ಒತ್ತಾಯಿಸಿದರೆ, ಜೂಮ್ ಅಥವಾ ವಾಟ್ಸ್‌ಆ್ಯಪ್ ವಿಡಿಯೋ ಕರೆ ಮೂಲಕ ಅಂತ್ಯಕ್ರಿಯೆಯನ್ನು ನಡೆಸಬಹುದು. ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ರಾಮ್ಲಾಲ್ ಹೇಳಿದರು.
ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ ಅಧ್ಯಕ್ಷ ಅಶ್ವಿನ್ ತ್ರಿಕಂಜಿ ಅವರು, ಸಭೆಯ ಫೇಸ್‌ಬುಕ್ ಪುಟದಲ್ಲಿ ಮಾನ್ಯತೆ ಪಡೆದ ಪುರೋಹಿತರ ಪಟ್ಟಿಯನ್ನು ಹೊಂದಿದ್ದು, ಅಂತಿಮ ವಿಧಿ-ವಿಧಾನಗಳನ್ನು ನಡೆಸಲು ಕುಟುಂಬಗಳು ಸಂಪರ್ಕಿಸಬಹುದು ಎಂದು ಹೇಳಿದರು.
ಈ ಹಿಂದೆ, ಜೋಹಾನ್ಸ್‌ಬರ್ಗ್ ಬಳಿಯ ಲೆನೇಶಿಯಾದ ಹಿಂದೂ ಪುರೋಹಿತೆ ಲೂಸಿ ಸಿಗಾಬನ್, ಸೋಂಕಿತ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಉಚಿತವಾಗಿ ನಡೆಸುತ್ತಿರುವ ಪುರೋಹಿತರಿಗೆ ಉಚಿತ ಪಿಪಿಇ ಕಿಟ್ ಒದಗಿಸುವ ಮೂಲಕ ಸಹಾಯ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಕಳೆದ ಎರಡು ತಿಂಗಳುಗಳಿಂದ, ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರು ಮತ್ತು ಸಾವುಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿವೆ ಎಂದರು.
ಗುರುವಾರ ಒಂದೇ ದಿನ 647 ಸಾವು ಮತ್ತು 11,000ಕ್ಕೂ ಹೆಚ್ಚು ಸೋಂಕಿತ ವರದಿಯಾಗಿವೆ. ಕಳೆದ ವರ್ಷ ಮಾರ್ಚ್‌ನಲ್ಲಿ ಮೊದಲ ಪ್ರಕರಣ ವರದಿಯಾದ ನಂತರ ಒಟ್ಟು ಸಾವುಗಳು 39,501 ಮತ್ತು ಸೋಂಕಿತರ ಸಂಖ್ಯೆ 1.38 ದಶಲಕ್ಷಕ್ಕೆ ತಲುಪಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಇತರ ಅಗತ್ಯ ಸೇವೆಗಳ ಸಿಬ್ಬಂದಿಗೆ ಆದ್ಯತೆ ನೀಡಲು ಮುಂದಿನ ತಿಂಗಳಲ್ಲಿ ಭಾರತದಿಂದ 15 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಕೋವಿಡ್-19 ಲಸಿಕೆಗಳನ್ನು ಸಾಗಿಸಲು ಸರ್ಕಾರ ಸಿದ್ಧವಾಗಿದೆ.