ಚಂಡೀಗಢ (ಪಂಜಾಬ್) : ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ನಟ ಮತ್ತು ಸಮಾಜಸೇವಕ ಸೋನು ಸೂದ್ ಅವರ ಹುಟ್ಟೂರಾದ ಪಂಜಾಬ್‌ನ ಮೋಗಾದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡದಂತೆ ಅವರನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.
ಕಳೆದ ಹಲವು ದಿನಗಳಿಂದ ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರನ್ನು ಬೆಂಬಲಿಸುತ್ತಿದ್ದರು. ಹಾಗೆ ಹಲವಾರು ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿದ್ದರು.
ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್ ಅಲಿಯಾಸ್ ಮಖಾನ್ ಬ್ರಾರ್ ಅವರ ಬೆಂಬಲಿಗರ ದೂರಿನ ಮೇರೆಗೆ ಸೋನು ಸೂದ್ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗೆಯೇ, ಸೋನು ಸೂದ್ ಅವರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಡಿಎಂಕೆ ಪರ ವಿದೇಶಿ ವ್ಯಕ್ತಿ ಪ್ರಚಾರ.. ವೀಸಾ ನಿಯಮ ಉಲ್ಲಂಘನೆಯಡಿ ನೋಟಿಸ್
ಸೂದ್ ಅವರ ಮನೆಯ ಹೊರಗೆ ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಸತ್ವಂತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ, ನಟ ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಸ್ಥಳೀಯ ನಿವಾಸಿ. ನಾನು ಯಾವುದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತ ನೀಡುವಂತೆ ಯಾರನ್ನೂ ಕೇಳಿಲ್ಲ. ನಾನು ಮತಗಟ್ಟೆಗಳ ಹೊರಗೆ ಸ್ಥಾಪಿಸಲಾದ ನಮ್ಮ ಬೂತ್‌ಗಳಿಗೆ ಭೇಟಿ ನೀಡುತ್ತಿದ್ದೆ ಅಷ್ಟೇ ಎಂದಿದ್ದಾರೆ.