ನವದೆಹಲಿ: ಪಂಜಾಬ್ ಘಟಕದ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಅವರ ವಿರುದ್ಧ ಪಕ್ಷದ ಶಿಸ್ತು ಸಮಿತಿ ಶಿಫಾರಸು ಮಾಡಿದ್ದ ಎರಡು ವರ್ಷಗಳ ಅಮಾನತು ಸಲಹೆಯನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ರದ್ದು ಮಾಡಿದ್ದಾರೆ. ಆದರೆ, ಪಕ್ಷದ ಎಲ್ಲಾ ಸಮಿತಿಗಳಿಂದ ಅವರನ್ನು ತೆಗೆದುಹಾಕಿರುವುದಾಗಿ ಮೂಲಗಳು ತಿಳಿಸಿವೆ.
ಜೊತೆಗೆ ಶಿಸ್ತು ಸಮಿತಿಯ ಶಿಫಾರಸ್ಸಿನ ಮೇರೆಗೆ ಸೋನಿಯಾ ಗಾಂಧಿ ಅವರು ಕೇರಳದ ನಾಯಕ ಕೆವಿ ಥಾಮಸ್ ಅವರನ್ನು ರಾಜ್ಯ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯಿಂದ ತೆಗೆದುಹಾಕಿರುವುದಾಗಿಯೂ ಮೂಲಗಳು ತಿಳಿಸಿವೆ. ಎಕೆ ಆಂಟನಿ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿ ಜಾಖರ್ ಅವರನ್ನು ಎರಡು ವರ್ಷಗಳ ಅಮಾನತುಗೊಳಿಸುವಂತೆ ಶಿಫಾರಸು ಮಾಡಿತ್ತು. ಜೊತೆಗೆ ಪಕ್ಷದ ನಿರ್ದೇಶನದ ವಿರುದ್ಧವಾಗಿ ಸಿಪಿಐ-ಎಂ ಸಭೆಯಲ್ಲಿ ಭಾಗವಹಿಸಿದ ಥಾಮಸ್ ಅವರಿಗೆ ಭವಿಷ್ಯದಲ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಬೇಕು ಎಂದು ಈ ಸಮಿತಿ ಅಭಿಪ್ರಾಯಪಟ್ಟಿದೆ.
ಜಾಖರ್ ಅವರು ಹಿರಿಯ ನಾಯಕರು ಮತ್ತು ಹಿಂದೆ ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರ ಮೇಲಿದ್ದ ಅಮಾನತು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರು ನಾಯಕರಿಗೆ ಈ ಹಿಂದೆ ನೋಟಿಸ್ ಕಳುಹಿಸಿದ್ದ ಶಿಸ್ತು ಸಮಿತಿ, ಈ ಬಗ್ಗೆ ಉತ್ತರಿಸಲು ಒಂದು ವಾರದ ಕಾಲಾವಕಾಶ ನೀಡಿತ್ತು. ಥಾಮಸ್ ಅವರು ತಾವು ಸಿಪಿಐ-ಎಂ ಸಭೆಯಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದು, ಜಾಖರ್ ಅವರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ಜೊತೆಗೆ ಬಿಜೆಪಿ ಬೆಂಬಲಿತ ರಾಜ್ಯ ಸರ್ಕಾರಕ್ಕೆ ಸೇರ್ಪಡೆಗೊಂಡ ಮೇಘಾಲಯದ ಐವರು ಶಾಸಕರನ್ನು ಅಮಾನತುಗೊಳಿಸಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಶಾಸಕರಾದ ಡಾ ಅಂಪಾರೀನ್ ಲಿಂಗ್ಡೋಹ್, ಪಿಟಿ ಸೌಕಿಮಿ, ಕಿಮ್ಫಾ ಮಾರ್ಬನಿಯಾಂಗ್, ಮೈರಾಲ್ಬೋರ್ನ್ ಸೈಯೆಮ್ ಮತ್ತು ಮೊಹೆಂದ್ರೋ ರಾಪ್ಸಾಂಗ್ ಅವರನ್ನು ಕಾಂಗ್ರೆಸ್ ಶಿಸ್ತು ಸಮಿತಿ ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಘಾಲಯ ಕಾಂಗ್ರೆಸ್ ಮುಖ್ಯಸ್ಥ ವಿನ್ಸೆಂಟ್ ಪಾಲಾ ಆಗ್ರಹಿಸಿದ್ದರು.
ಈ ಬಗ್ಗೆ ಶಿಸ್ತು ಸಮಿತಿ ಸಭೆ ಸೇರುವ ಮೊದಲು ಖ್ಯಾತ ಕವಿ ಜಾವೇದ್ ಅಖ್ತರ್ ಅವರ ದ್ವಿಪದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜಾಖರ್,"ಸ್ವಾಭಿಮಾನ ಹೊಂದಿರುವವರನ್ನು ಇಂದು ಶಿರಚ್ಛೇದ ಮಾಡಲಾಗುತ್ತದೆ. ಎಂದು ಬರೆದಿದ್ದಾರೆ. ಈ ನಾಯಕರ ಅಮಾನತಿನ ಹಿಂದೆ ಕಾಂಗ್ರೆಸ್ ಪಕ್ಷ ಬೇರೆಯೇ ಯೋಜನೆ ರೂಪಿಸಿದ್ದು, ದಲಿತ ಸಮುದಾಯದ ಮತವನ್ನು ಸೆಳೆಯುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ನಿರ್ದೇಶನಕ್ಕೆ ಬದ್ಧರಾಗಿಲ್ಲ ಎಂದು ಈ ನಾಯಕರುಗಳ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮಕೈಗೊಂಡಿತ್ತು.
ಓದಿ : ರಥೋತ್ಸವದ ವೇಳೆ ವಿದ್ಯುತ್ ಅವಘಡ.. ಹತ್ತು ಭಕ್ತಾದಿಗಳ ಸಾವು, ಹಲವರಿಗೆ ಗಾಯ!