ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆ ಕರೆಯಲಾಗಿದೆ. ಬೆಳಗ್ಗೆ 10:30ಕ್ಕೆ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಆಯೋಜನೆಗೊಂಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಪಕ್ಷದ ಸದಸ್ಯತ್ವ ಅಭಿಯಾನ, ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಜನ ಜಾಗರಣ ಅಭಿಯಾನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಇದೇ ವೇಳೆ ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವರ್ಷ ಪಂಜಾಬ್ನಲ್ಲಿ ನಡೆಯಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಕಳೆದ ವಾರ ಕೂಡ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆದಿದ್ದು, ಕೆಲವೊಂದು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ವಿಶೇಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14ರಂದು ಜನ ಜಾಗರಣ ಅಭಿಯಾನ ಪ್ರಾರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವಿಷಯವಾಗಿ ಈಟಿವಿ ಭಾರತ್ ಜೊತೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಬೆಲೆ ಏರಿಕೆ ಮತ್ತು ರೈತರ ಸಂಕಷ್ಟಗಳ ವಿರುದ್ಧ ನವೆಂಬರ್ 14ರಿಂದ 29ರವರೆಗೆ ಬೃತಹ್ ಆಂದೋಲನ ನಡೆಸಲು ನಿರ್ಧರಿಸಿದೆ ಎಂದಿದ್ದಾರೆ.