ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಸುತ್ತಿದ್ದು, ಅನ್ನದಾತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಾಗೂ ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಈ ಬಾರಿ ಕೂಡ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆ (ಡಿ.9) ತಮ್ಮ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.
"ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಸಮಸ್ಯೆಗಳು ಮತ್ತು ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಸೋನಿಯಾ ಗಾಂಧಿ ಈ ವರ್ಷ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಜನ್ಮದಿನದಂದು ಕೇಕ್ ಕತ್ತರಿಸುವುದು ಸೇರಿದಂತೆ ಯಾವುದೇ ರೀತಿಯ ಆಚರಣೆ ಮಾಡದಿರಿ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯಗಳ ಎಲ್ಲಾ ಉಸ್ತುವಾರಿಗಳಿಗೆ ಹೇಳಿರುವುದಾಗಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತೀವ್ರ ಚಳಿಯ ನಡುವೆಯೂ ರೈತರು ಪ್ರತಿಭಟಿಸಲು ರಸ್ತೆಗಿಳಿದಿದ್ದಾರೆ, ಸರ್ಕಾರದ ದಬ್ಬಾಳಿಕೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ ನಾಯಕರು ಆಚರಣೆಗಳ ಬದಲು ರೈತರಿಗೆ ಪರಿಹಾರ ನೀಡುವ ಪ್ರಯತ್ನಗಳನ್ನು ಬಲಪಡಿಸಬೇಕೆಂದು ಕೈ ನಾಯಕಿ ಹೇಳಿದ್ದಾರೆ.
ಓದಿ: ರೈತರ ಭಾರತ್ ಬಂದ್ ದಿನದಂದೇ ದೇಶಾದ್ಯಂತ ವೈದ್ಯರ ಮುಷ್ಕರ
ರೈತ ಸಂಘಟನೆಗಳು ಕರೆ ನೀಡಿದ ಇಂದಿನ 'ಭಾರತ್ ಬಂದ್' ಕರೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು, ದೇಶಾದ್ಯಂತದ ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಜೋಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದೆ.
ಕಳೆದ ಬಾರಿ ದೇಶಾದ್ಯಂತ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಂದ ಮನನೊಂದಿದ್ದ ಸೋನಿಯಾ ಹುಟ್ಟುಹಬ್ಬ ಆಚರಿಸಿರಲಿಲ್ಲ.