ಭುವನೇಶ್ವರ್(ಒಡಿಶಾ): ಪದ್ಮಶ್ರೀ ಪುರಸ್ಕೃತ ದಿವಂಗತ ಸಂಸದ ಮತ್ತು ವಾಸ್ತುಶಿಲ್ಪಿ ರಘುನಾಥ್ ಮೊಹಪಾತ್ರ ಹಾಗೂ ಅವರ ಇಬ್ಬರ ಮಕ್ಕಳೂ ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ಹಿನ್ನೆಲೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಮೃತ ರಘುನಾಥ್ ಮೊಹಪಾತ್ರ ಪತ್ನಿಗೆ ಸೋನಿಯಾ ಗಾಂಧಿ ಸಂತಾಪ ಪತ್ರ ಬರೆದಿದ್ದಾರೆ. ರಘುನಾಥ್ ಮೊಹಪಾತ್ರ ಮತ್ತು ಅವರ ಇಬ್ಬರು ಗಂಡುಮಕ್ಕಳ ನಿಧನದ ಬಗ್ಗೆ ಸೋನಿಯಾ ಪತ್ರದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಡಿಶಾದ ಸಂಸ್ಕೃತಿ, ಕಲೆ ಮತ್ತು ಶಿಲ್ಪಕಲೆಯನ್ನು ಮುಂಚೂಣಿಗೆ ತರುವಲ್ಲಿ ಖ್ಯಾತ ವಾಸ್ತುಶಿಲ್ಪಿ ರಘುನಾಥ್ ಮೊಹಪಾತ್ರ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬದುಕಿದ್ದರೆ ಭವಿಷ್ಯದಲ್ಲಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದರು. ಇಂತಹ ದುರಂತ ಸಮಯದಲ್ಲಿ ನಮ್ಮ ಸಹಾನುಭೂತಿ ವ್ಯಕ್ತಪಡಿಸಲು ಪದಗಳಿಲ್ಲ. ಆದರೆ, ಈ ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಧೈರ್ಯ ಮತ್ತು ಶಕ್ತಿಯನ್ನು ನಿಮ್ಮ ಕುಟುಂಬಕ್ಕೆ ಕೊಡುವಂತೆ ದೇವರನ್ನು ನಾವು ಪ್ರಾರ್ಥಿಸುತ್ತೇವೆ ಎಂದು ಸೋನಿಯಾ ಪತ್ರದಲ್ಲಿ ಶೋಕ ಸಂದೇಶ ರವಾನಿಸಿದ್ದಾರೆ.