ನವದೆಹಲಿ: ಮುಂಬರುವ ಸಂಸತ್ ಅಧಿವೇಶನದಲ್ಲಿ ಅಗ್ನಿಪಥ ಯೋಜನೆಯನ್ನು ಹಿಂಪಡೆಯಲು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಜುಲೈ 18 ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲು ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯತಂತ್ರದ ಸಭೆಯಲ್ಲಿ ಸೋನಿಯಾ ಗಾಂಧಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಪಂಜಾಬ್‌ನ ಲೋಕಸಭಾ ಸದಸ್ಯ ತಿವಾರಿ ಅವರು ಅಗ್ನಿಪಥ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದ ನಂತರ ಕಾಂಗ್ರೆಸ್ ಅವರಿಂದ ದೂರವಿತ್ತು, ಇಂತಹ ನೀತಿಗಳ ಅಗತ್ಯ ಇದೆ ಎಂದು ತಿವಾರಿ ಹೇಳಿಕೆ ನೀಡಿದ್ದರು.
ಅಗ್ನಿಪಥ ಯೋಜನೆಯನ್ನು ತರಾತುರಿಯಲ್ಲಿ ರೂಪಿಸಲಾಗಿದೆ. ಇದು ಯುವಕರ ವಿರುದ್ಧವಾಗಿದೆ ಮತ್ತು ಸಶಸ್ತ್ರ ಪಡೆಗಳ ಧೈರ್ಯವನ್ನು ಕುಗ್ಗಿಸುತ್ತದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಅಗ್ನಿಪಥ್ ಯೋಜನೆ ಕುರಿತು ಚರ್ಚೆ ನಡೆದರೆ, ಅತ್ಯುತ್ತಮ ವಾಗ್ಮಿ ಎಂದು ಹೆಸರಾಗಿರುವ ತಿವಾರಿ ಅವರನ್ನು ಈ ವಿಷಯದ ಬಗ್ಗೆ ಮಾತನಾಡಲು ಪಕ್ಷವು ಸೂಚಿಸುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಗ್ನಿಪಥ ವಿರುದ್ಧ ನಮ್ಮ ಹೋರಾಟ ಅಚಲ: ಅಗ್ನಿಪಥ್ ಅಷ್ಟೇ ಅಲ್ಲ ಪಕ್ಷದ ಶಾಸಕರು ಜನಪರ ಸಮಸ್ಯೆಗಳನ್ನು ಎತ್ತುವ ಮೂಲಕ ಆಕ್ರಮಣಕಾರಿ ವಿರೋಧವನ್ನು ಪ್ರದರ್ಶಿಸಲು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹಾಗೆ ಬೆಲೆ ಏರಿಕೆಯಂತಹ ವಿಷಯಗಳನ್ನು ಕಾಂಗ್ರೆಸ್ ನೇರವಾಗಿ ಪ್ರಸ್ತಾಪಿಸುತ್ತದೆ ಎಂದಿದ್ದಾರೆ.
ಇಂಧನ ಮತ್ತು ಆಹಾರ ಪದಾರ್ಥಗಳ ಹೆಚ್ಚಿನ ಬೆಲೆಗಳು, ನಿರುದ್ಯೋಗ, ಫೆಡರಲಿಸಂ ಮೇಲಿನ ದಾಳಿ, ಜಾರುತ್ತಿರುವ ಆರ್ಥಿಕತೆ ಮತ್ತು ರೂಪಾಯಿ, ಅಲ್ಪಸಂಖ್ಯಾತರ ಮೇಲಿನ ದಾಳಿ ಮತ್ತು ದ್ವೇಷ ಭಾಷಣಗಳು, ಸಂಸ್ಥೆಗಳ ಮೇಲಿನ ದಾಳಿ, ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ, ಆದಿವಾಸಿಗಳ ಜೀವನದ ಮೇಲೆ ಪರಿಣಾಮ ಬೀರುವ ಅರಣ್ಯ ಸಂರಕ್ಷಣೆ ನಿಯಮಗಳು, ಸಾರ್ವಜನಿಕರ ಖಾಸಗೀಕರಣ ಮುಂಗಾರು ಅಧಿವೇಶನದಲ್ಲಿ ಬ್ಯಾಂಕ್‌ಗಳು ಮತ್ತು ಚೀನಾದಿಂದ ಗಡಿ ಬೆದರಿಕೆ ಕೂಡ ಕಾಂಗ್ರೆಸ್ ಕಾರ್ಯಸೂಚಿಯಲ್ಲಿ ಇರುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ದೇಶದಲ್ಲಿ ಶಾಂತಿ - ಸ್ಥಿರತೆಯ ಅಗತ್ಯವಿದೆ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಆರ್ಥಿಕತೆ ಕುಸಿಯುತ್ತಿರುವಾಗಲೂ ದೇಶದಲ್ಲಿ ಕೋಮು ಉದ್ವಿಗ್ನತೆ ಇದೆ. ಪ್ರಗತಿಗಾಗಿ ನಮಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ ಎಂದಿದ್ದಾರೆ.
ಜ್ವಲಂತ ಸಮಸ್ಯೆಗಳನ್ನು ಎತ್ತುವುದು ಪ್ರಮುಖ ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವಾಗಿದೆ. ಸರ್ಕಾರ ಇದುವರೆಗೆ ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ಪಟ್ಟಿ ಮಾಡಿಲ್ಲ ಎಂದು ರಾಜ್ಯಸಭಾ ಸದಸ್ಯ ಶಕ್ತಿ ಸಿನ್ಹ್ ಗೋಹಿಲ್ ಹೇಳಿದ್ದಾರೆ.
ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆಗೆ ಜಂಟಿ ನಾಮನಿರ್ದೇಶನವನ್ನು ಅಂತಿಮಗೊಳಿಸಲು ಜುಲೈ 17 ರಂದು ವಿರೋಧ ಪಕ್ಷಗಳ ಸಭೆಯನ್ನು ಆಯೋಜಿಸುವಂತೆ ಖರ್ಗೆಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ನಾವು ಎಲ್ಲ ಪಕ್ಷಗಳನ್ನು ಆಹ್ವಾನಿಸಿದ್ದೇವೆ. ನಾವೇ ನಮ್ಮ ಅಭ್ಯರ್ಥಿಯನ್ನು ಹಾಕುವುದಿಲ್ಲ ಬದಲಾಗಿ ವಿರೋಧ ಪಕ್ಷಗಳು ಅನುಮೋದಿಸುವ ಯಾವುದೇ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಜುಲೈ 17 ರಂದು ಸರ್ಕಾರ ಕರೆದಿರುವ ವಾರ್ಷಿಕ ಸರ್ವಪಕ್ಷ ಸಭೆಯ ನಂತರ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ವಿರುದ್ಧ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: 56 ವರ್ಷದಲ್ಲೇ ಮೊದಲ ಬಾರಿಗೆ ದೊಡ್ಡ ಬಿರುಕು: ಶಿವ ಸೈನಿಕರಲ್ಲಿ 'ಗುರು ಪೂರ್ಣಿಮೆ' ಸಂಭ್ರಮ ಕಸಿದ ರಾಜಕೀಯ!