ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಏರಿಕೆ ಮತ್ತು ನಿಯಂತ್ರಣ ಕುರಿತಂತೆ ಚರ್ಚೆ ನಡೆಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ತಮ್ಮ ಪಕ್ಷದ ಲೋಕಸಭಾ ಸಂಸದರ ಸಭೆ ಕರೆದಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲಾಗುತ್ತದೆ. ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ಶನಿವಾರ ಸೋನಿಯಾ ಗಾಂಧಿ, ರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದರು. ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ, ಈ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಷ್ಟ್ರೀಯ ನೀತಿಯನ್ನು ಸಿದ್ಧಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ಮಗು ಉಳಿಸಲು 72 ದಿನದಲ್ಲಿ 16 ಕೋಟಿ ಸಂಗ್ರಹಿಸಿದ ದಂಪತಿ.!
ಕೋವಿಡ್ ಲಾಕ್ಡೌನ್ನಿಂದಾಗಿ ನಾಗರಿಕರಿಗೆ ತೊಂದರೆಗಳಾಗುತ್ತಿದ್ದು, ಲಸಿಕೆಗಳನ್ನು ನೀಡುವ ಜೊತೆಗೆ ಬಡವರ ಬ್ಯಾಂಕ್ ಖಾತೆಗಳಿಗೆ ತಲಾ ಆರು ಸಾವಿರ ರೂಪಾಯಿ ಜಮಾ ಮಾಡಬೇಕೆಂದು ಸೋನಿಯಾ ಈ ಮೊದಲಿನಿಂದಲೂ ಒತ್ತಾಯಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಮಾತನಾಡಿದ್ದು, ದೇಶಾದ್ಯಂತ ಲಾಕ್ಡೌನ್ ಘೋಷಿಸಬೇಕೆಂದು, ಅದಕ್ಕೂ ಮೊದಲು ಆರ್ಥಿಕವಾಗಿ ದುರ್ಬಲರಿಗೆ ಕನಿಷ್ಠ ಆದಾಯ ಕಾರ್ಯಕ್ರಮ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು.