ಕೋತಗುಡಂ (ತೆಲಂಗಾಣ): ಲಾಕ್ಡೌನ್ನಿಂದ ಸಲೂನ್ ಅಂಗಡಿ ಬಂದ್ ಮಾಡಿದ್ದರಿಂದ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಶ್ವರೋಪೇಟ ನಗರದ ನೀಲಾಚಲಂ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಆದರೆ, ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಲು ಪುತ್ರ ನಿರಾಕರಿಸಿದ್ದಾನೆ. ಹೀಗಾಗಿ 10 ವರ್ಷದ ಪುತ್ರಿ ಅಂತ್ಯಸಂಸ್ಕಾರ ನೆರವೇರಿಸಿರುವ ಹೃದಯ ಹಿಂಡುವ ಘಟನೆಗೆ ಸಾಕ್ಷಿಯಾಗಿದೆ. ಲಿಂಗಿಶೆಟ್ಟಿ ನೀಲಾಚಲಂ ನಗರದಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಆದರೆ, ಲಾಕ್ಡೌನ್ನಿಂದ ಬಾಗಿಲು ಹಾಕಿದ್ದ ಅಂಗಡಿ ಸಾಲಕ್ಕೆ ದಾರಿ ಮಾಡಿಕೊಟ್ಟಿತು. ಅನ್ಲಾಕ್ ಮಾಡಲಾಯಿತಾದರೂ ಆದಾಯ ಮಾತ್ರ ಕೈಹಿಡಿದಿರಲಿಲ್ಲ.
ಬಳಿಕ ನೀಲಾಚಲಂ ಊರಿನಲ್ಲಿ ಮತ್ತು ಸಂಬಂಧಿಕರ ಬಳಿ ಸಾಲ ಮಾಡಲು ಆರಂಭಿಸಿದ. ಈ ಸಾಲ ಲಕ್ಷದವರೆಗೂ ತಲುಪಿತ್ತು. ಈ ಸಾಲ ತೀರಿಸಲು ತನ್ನ ಮಗನ ಬಳಿ ಕೆಲಸದಲ್ಲಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಆದರೆ, ಮಗ ಇದ್ಯಾವುದಕ್ಕೂ ತಲೆಹಾಕದೇ ತನ್ನದೇ ಕೆಲಸದಲ್ಲಿ ತೊಡಗುತ್ತಿದ್ದ. ಪ್ರತಿ ಬಾರಿಯೂ ಮಗನಿಂದ ಸರಿಯಾದ ಉತ್ತರ ಬರದಿದ್ದಾಗ ನೀಲಾಚಲಂ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದ.
ಬಳಿಕ ಪೊಲೀಸರು ಸಹ ಮಗನನ್ನು ಕರೆಯಿಸಿ ತಂದೆಯ ಕಾರ್ಯದಲ್ಲಿ ಕೈಜೊಡಿಸುವಂತೆ ಬುದ್ಧಿಮಾತು ಹೇಳಿದ್ದರು. ಆದರೆ, ಪೊಲೀಸರ ಮಾತಿಗೂ ಆತ ಗಮನಹರಿಸಿರಲಿಲ್ಲ. ಹೀಗೆ ಮುಂದುವರಿದಿದ್ದರಿಂದ ತಂದೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಂದೆಯ ಮರಣದ ನಂತರ ಅಂತಿಮ ವಿಧಿವಿಧಾನ ನೆರವೇರಿಸಲು ಪುತ್ರ ನಿರಾಕರಿಸಿದ್ದಾನೆ. ಇದರಿಂದಾಗಿ ಅವರ 10 ವರ್ಷದ ಪುತ್ರಿ ಕಣ್ಣೀರಿಡುತ್ತಾ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ. ತಂದೆಯ ಸಾವಿನ ದುಃಖದಲ್ಲೇ ಮಗಳು ಶವಸಂಸ್ಕಾರದಲ್ಲಿ ಪಾಲ್ಗೊಂಡು ತನ್ನ ಕರ್ತವ್ಯ ಪೂರೈಸಿದ್ದಾಳೆ.
ಓದಿ: ಕಬ್ಬಿಣದ ಸರಳುಗಳ ಹೊತ್ತಿದ್ದ ಟಿಪ್ಪರ್ ಪಲ್ಟಿ : 13 ಕಾರ್ಮಿಕರ ದುರ್ಮರಣ