ಬಂದಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಇಲ್ಲಿನ ನರೈನಿ ಪ್ರದೇಶದಲ್ಲಿ ಯುವಕನೊಬ್ಬ ತನ್ನ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ತನ್ನ ಮೈ ಮೇಲೆ ದೇವರು ಬಂದಂತೆ ಮಾತನಾಡುತ್ತಿದ್ದ ಆರೋಪಿ, ಈ ಜನ್ಮದಲ್ಲಿ ನಾನು ಹೆಣ್ಣನ್ನು ಕೊಲ್ಲಬೇಕಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ಇಲ್ಲಿನ ರಾಜನಗರದ ನಿವಾಸಿ ರಮಾನಂದಿ ಎಂಬುವವರೇ ಮಗನಿಂದ ಕೊಲೆಯಾದ ತಾಯಿಯಾಗಿದ್ದು, ಆರೋಪಿ ರಾಮಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ 3 ಗಂಟೆಗೆ ಮನೆಯೊಂದಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ಸ್ಥಳೀಯರು ನೀಡಿದ್ದರು. ಅಂತೆಯೇ, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆದಿದ್ದಾರೆ.
ಈ ವೇಳೆ ಮನೆಯ ಕೊಠಡಿಯೊಂದರಲ್ಲಿ ರಮಾನಂದಿ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದರು. ಮತ್ತೊಂದೆಡೆ, ಆರೋಪಿ ರಾಮಬಾಬು ರಕ್ತದ ಕಲೆಗಳಿಂದ ಕೂಡಿದ್ದ ದೊಣ್ಣೆ ಹಿಡಿದು ಕುಳಿತಿದ್ದ. ಅಂತೆಯೇ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ರಮಾನಂದಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಇಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇದೇ ವೇಳೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ನಡೆಸಿದ್ದಾರೆ. ಆಗ ಪಾಪಿ ಮಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ, ಭಗವಾನ್ ಮಹಾದೇವ ತನ್ನ ಬಳಿಗೆ ಬಂದು ನಾನು ನಾಗೇಶ್ವರನ ಅವತಾರ ಎಂದು ಹೇಳಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಜನ್ಮದಲ್ಲಿ ನಾನು ಒಬ್ಬ ಹೆಣ್ಣನ್ನು ಕೊಲ್ಲಬೇಕಾಗಿತ್ತು. ಹೀಗಾಗಿ ನಾನು ತಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದೆ. ಇಷ್ಟೇ ಅಲ್ಲ, ಕತ್ತಿಯಿಂದ ಈ ಕೊಲೆ ಮಾಡಬೇಕಿತ್ತು. ಆದರೆ ನನಗೆ ಕತ್ತಿ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಈತನ ಸಹೋದರ ಶ್ಯಾಂಬಾಬು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸೋರಿಕೆಯಿಂದ ಶೆಡ್ನಲ್ಲಿ ಬೆಂಕಿ: ಇಂದು ಮತ್ತಿಬ್ಬರು ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ