ಮುಜಾಫರ್‌ಪುರ(ಬಿಹಾರ): ಮಾನಸಿಕ ವಿಕಲಚೇತನ ಮಗನೊಬ್ಬ ಪೋಷಕರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಅಜಯ್ ಸಾಹ್ನಿ ಕೊಲೆ ಮಾಡಿದ ಆರೋಪಿ. ಈತ ಮುಜಾಫರ್‌ಪುರ ಜಿಲ್ಲೆಯ ಪಾರು ಪೊಲೀಸ್ ಠಾಣಾ ವ್ಯಾಪ್ತಿಯ ಜಾಫರ್‌ಪುರ ಖುತಾಹಿ ಗ್ರಾಮದ ನಿವಾಸಿಯಾಗಿದ್ದಾನೆ. ಆರೋಪಿ ಮೊದಲು ತಂದೆ - ತಾಯಿಯನ್ನು ಮನಬಂದಂತೆ ಥಳಿಸಿದ್ದಾನೆ. ಬಳಿಕ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆರೋಪಿ ಪೋಷಕರನ್ನು ಕೊಲೆ ಮಾಡಲು ಮುಂದಾದಾಗ ಸಹೋದರಿ ಜ್ಯೋತಿ ತಡೆಯುಲು ಬಂದಿದ್ದಳು. ಆಗ ಆರೋಪಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದನು. ಕೂಡಲೇ ಯುವತಿ ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗಡೆ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ಕೂಡಲೇ ಗ್ರಾಮಸ್ಥರು ಆರೋಪಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಖಾಕಿ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಯುವಕ ಅಜಯ್ ಸಾಹ್ನಿ ಮಾನಸಿಕ ವಿಕಲಚೇತನನಾಗಿದ್ದು, ಈ ಹಿಂದೆಯೂ ತಲೆಹರಟೆಯ ಕೆಲಸಗಳನ್ನು ಮಾಡುತ್ತಿದ್ದ. ಈ ಬಗ್ಗೆ ಪೋಷಕರು ಬುದ್ದಿ ಹೇಳಿದ್ದಾರೆ. ಇದು ಆತನ ಕೋಪಕ್ಕೆ ಕಾರಣವಾಗಿ ಕೊಲೆ ಮಾಡಿದ್ದಾನೆ. ಆದರೆ ಯುವಕ ಪೋಷಕರನ್ನು ಕೊಲೆ ಮಾಡುವ ಹಂತಕ್ಕೆ ಹೋಗುತ್ತಾನೆ ಎಂದು ಊಹಿಸಿರಲಿಲ್ಲ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸೂಕ್ತ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮಗಳ ಮೃತದೇಹ 10 ಕಿ.ಮೀ ಹೊತ್ತು ಸಾಗಿದ ತಂದೆ.. ಕುಟಂಬದವರನ್ನ ಮನವೋಲಿಸಬೇಕಾಗಿತ್ತೆಂದ ಸಚಿವ!