ಜಮ್ಮು: ಗಡಿಯಲ್ಲಿ ಪಾಕ್ ಪುಂಡಾಟ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಜಮ್ಮು-ಕಾಶ್ಮೀರದ ರಾಜೌರಿ ಗಡಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.
ಇಂದು ಮಧ್ಯಾಹ್ನ 3:30ರಿಂದ 5:30ರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಸುಬೇದಾರ್ ರವೀಂದ್ರ ಹುತಾತ್ಮರಾಗಿದ್ದಾಗಿ ಸೇನಾ ಮೂಲಗಳು ಮಾಹಿತಿ ನೀಡಿವೆ. ಮೇಲಿಂದ ಮೇಲೆ ಶೆಲ್ ದಾಳಿ ನಡೆಸುತ್ತಿರುವ ಪಾಕ್ಗೆ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸುಬೇದಾರ್ ರವೀಂದ್ರ ಧೈರ್ಯಶಾಲಿ ಹಾಗೂ ಪ್ರಾಮಾಣಿಕ ಸೈನಿಕ. ಅವರ ಪರಮ ತ್ಯಾಗ ಮತ್ತು ಕರ್ತವ್ಯವನ್ನು ದೇಶ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.