ಕೋಯಿಕ್ಕೋಡ್, ಕೇರಳ: ಸೋಲಾರ್ ಹಗರಣದಲ್ಲಿ ಆರೋಪಿ ಉದ್ಯಮಿ ಸರಿತಾ ನಾಯರ್ಗೆ ಕೋಯಿಕ್ಕೋಡ್ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಓರ್ವ ವ್ಯಕ್ತಿಯಿಂದ ಹಣ ಪಡೆದು ಸೋಲಾರ್ ಫಲಕಗಳನ್ನು ಪೂರೈಸದ ಆರೋಪದಲ್ಲಿ ಶಿಕ್ಷೆ ವಿಧಿಸಲಾಗಿದ್ದು, 40 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಅಬ್ದುಲ್ ಮಜೀದ್ ಎಂಬುವವರು ದೂರು ದಾಖಲಿಸಿದ್ದು, ಹಣ ತೆಗೆದುಕೊಂಡು ಸರಿತಾ ನಾಯರ್ ಸೌರ ಫಲಕಗಳನ್ನು ನೀಡಲಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದೂರಿನ ವಿಚಾರಣೆಗೆ ಕರೆದರೂ ಸರಿತಾ ನಾಯರ್ ಹಾಜರಾಗಿರಲಿಲ್ಲ.
ಇದನ್ನೂ ಓದಿ: ಐಸಿಯು ಬೆಡ್ ನೀಡದ ಆಸ್ಪತ್ರೆ ಸಿಬ್ಬಂದಿ ಮೇಲೆ ಕುಟುಂಬಸ್ಥರಿಂದ ಹಲ್ಲೆ.. ವಿಡಿಯೋ
ಇದರಿಂದಾಗಿ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಕೋಯಿಕ್ಕೋಡ್ ಪೊಲೀಸರು ಸರಿತಾ ನಾಯರ್ ಅವರನ್ನು ಕಳೆದ ವಾರವಷ್ಟೇ ಬಂಧಿಸಿದ್ದರು.
ಸರಿತಾ ನಾಯರ್ ಬಂಧನದ ನಂತರ ಆಕೆಯನ್ನು ತಿರುವನಂತಪುರದ ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಈಗ ವಿಚಾರಣೆ ನಡೆಸಿರುವ ಕೋಯಿಕ್ಕೋಡ್ ಮ್ಯಾಜಿಸ್ಟ್ರೇಟ್ ಕೋರ್ಟ್ 6 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಆಲಪ್ಪುಳ ಮತ್ತು ಪಥನಮತ್ತಟ್ಟ ಜಿಲ್ಲೆಗಳಲ್ಲೂ ಸರಿತಾ ನಾಯರ್ ವಿರುದ್ಧ ಇದೇ ರೀತಿಯ ವಾರಂಟ್‌ಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್ ವಿಚಾರಣೆ ನಡೆಸಲಿದೆ.