ಕೇರಳ : ಸೌರ ವಿದ್ಯುತ್ ಫಲಕ ಅವ್ಯವಹಾರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿ ಅನೇಕ ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಏನಿದು ಸೋಲಾರ್ ಹಗರಣ : ಕೊಚ್ಚಿಯ ಕೊಟ್ಟಾರಕಾರ್ ಮೂಲದ ಸರಿತಾ ನಾಯರ್ ಎಂಬ ಮಹಿಳೆ ತನ್ನ ಮಾಜಿ ಪತಿ ಬಿಜು ರಾಧಾಕೃಷ್ಣನ್ ಜತೆಗೂಡಿ ಚಿತ್ತೂರಿನಲ್ಲಿ 'ಟೀಮ್ ಸೋಲಾರ್ ರಿನಿವೆಬಲ್ ಎನರ್ಜಿ ಸಲ್ಯೂಷನ್' ಎಂಬ ಸಂಸ್ಥೆ ಹುಟ್ಟು ಹಾಕಿದ್ದಳು. ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದಳು.
ಇದಕ್ಕಾಗಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಕಚೇರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಬಳಸಿಕೊಂಡಿದ್ದಳು. ಹಗರಣದ ಸುಳಿ ಮುಖ್ಯಮಂತ್ರಿ ಕೊರಳಿಗೆ ಸುತ್ತಿಕೊಳ್ಳುತ್ತಲೇ ಅವರ ಕಚೇರಿಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಸರಿತಾ, ಬಿಜು ಸೇರಿದಂತೆ ಶಾಲೂ ಎಂಬ ಟಿವಿ ನಟಿ, ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಕಚೇರಿಯ ಟೆನ್ನಿ ಜೊಪ್ಪನ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಓದಿ: ಪರ್ಷಿಯನ್ ತಳಿಯ ವಿಶಿಷ್ಟ ಬೆಕ್ಕು ಇದೀಗ ಆಂಧ್ರದಲ್ಲಿ : ವಿಡಿಯೋ ನೋಡಿ
ಸೌರ ವಿದ್ಯುತ್ ಯೋಜನೆಗಾಗಿ ಎಸ್‌ಸಿಒಎಸ್‌ಎಸ್‌ಎ ಎಜುಕೇಷನಲ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಉಮ್ಮನ್ ಚಾಂಡಿ ಸೇರಿ ಇತರರು ₹1.60 ಕೋಟಿ ಪಡೆದಿದ್ದು, ಅದನ್ನು ವಾಪಸ್ ನೀಡುವಂತೆ ಕೋರಿ ಬೆಂಗಳೂರು ಮೂಲದ ಉದ್ಯಮಿ ಎಂ ಕೆ ಕುರುವಿಲ್ಲಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.