ಸೊಲ್ಲಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ನಡುವೆ ಮೂಲ ಸೌಕರ್ಯಗಳಿಲ್ಲ ಎಂದು 11 ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರಲು ಅನುಮತಿ ನೀಡುವಂತೆ ಆಗ್ರಹಿಸಿದ್ದವು. ಬಳಿಕ ಈ ಎಲ್ಲ ಗ್ರಾಪಂಗಳಿಗೆ ಮಹಾರಾಷ್ಟ್ರ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿ ವಜಾ ಮಾಡುವ ಎಚ್ಚರಿಕೆ ನೀಡಿತ್ತು. ನಂತರ 10 ಗ್ರಾಮ ಪಂಚಾಯಿತಿಗಳು ತಮ್ಮ ನಿರ್ಣಯವನ್ನು ಹಿಂಪಡೆದಿದ್ದು, ಅಳಗಿ ಗ್ರಾಮ ಮಾತ್ರ ಯಾವುದೇ ಉತ್ತರ ನೀಡಿರಲಿಲ್ಲ. ಕೊನೆಗೆ ಬುಧವಾರ ಬೆಳಗ್ಗೆ ಅಳಗಿ ಗ್ರಾಪಂ ಮುಖ್ಯಸ್ಥರು ಕೂಡ ಮಹಾರಾಷ್ಟ್ರ ರಾಜ್ಯದಲ್ಲಿಯೇ ಇರುವುದಾಗಿ ಲಿಖಿತ ಉತ್ತರ ನೀಡಿದ್ದಾರೆ.
ನಿರ್ಣಯ ಹಿಂಪಡೆದ ಗ್ರಾಮಗಳು: ಕಳೆದ ಒಂದು ತಿಂಗಳ ಹಿಂದೆ ಅಕ್ಕಲಕೋಟ ತಾಲೂಕಿನ ತಡವಾಲ್ ಪ್ರದೇಶದ 11 ಗ್ರಾಮಗಳ ನಿವಾಸಿಗಳು ಕರ್ನಾಟಕ ಸರ್ಕಾರದ ಪರವಾಗಿ ಘೋಷಣೆಗಳನ್ನು ಕೂಗಿದ್ದರು. ಅಷ್ಟೇ ಅಲ್ಲ ಇಲ್ಲಿನ ಗ್ರಾಮಸ್ಥರು ಕರ್ನಾಟಕಕ್ಕೆ ಹೋಗುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ 11 ಗ್ರಾಮಗಳ ಸರಪಂಚ್‌ಗಳಿಗೆ ನೋಟಿಸ್ ಕಳುಹಿಸಿತ್ತು.
ಅಕ್ಕಲಕೋಟ ತಾಲೂಕಿನ ಧರಸಂಘ, ಅಂಡೆವಾಡಿ ಖುರ್ದ್, ಶಾವಲ್, ಹಿಲ್ಲಿ, ಮಂಗ್ರುಲ್, ದೇವಿಕಾವ್ತೆ, ಕೇಗಾಂವ್ ಬು ಅಳ್ಗೆ, ಕಲ್ಕರ್ಜಾಲ್, ಕೊರ್ಸೆಗಾಂವ್, ಶೇಗಾಂವ್ ಸೇರಿದಂತೆ 11 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂಬ ನಿರ್ಣಯವನ್ನು ಹಿಂಪಡೆದಿವೆ.
(ಓದಿ: ಕರ್ನಾಟಕ ಸೇರಲು ಮತದಾನ ಬಹಿಷ್ಕರಿಸಿದ ಮಹಾರಾಷ್ಟ್ರದ ಗಡಿ ಗ್ರಾಮ)
ಕರ್ನಾಟಕಕ್ಕೆ ತೆರಳುವ ಎಚ್ಚರಿಕೆ: ನಾವು ಗಡಿ ಭಾಗದಲ್ಲಿರುವುದರಿಂದ ಮಹಾರಾಷ್ಟ್ರ ಸರ್ಕಾರ ನಮಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಕರ್ನಾಟಕಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿಗೆ ಇಲ್ಲಿನ ಗ್ರಾಮಸ್ಥರು ಠರಾವು ರವಾನಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಅಕ್ಕಲಕೋಟ ಗ್ರೂಪ್ ಡೆವಲಪ್‌ಮೆಂಟ್ ಅಧಿಕಾರಿ 11 ಗ್ರಾಪಂಗಳಿಗೆ ನೋಟಿಸ್ ಜಾರಿ ಮಾಡಿದ್ದರು.
ಈ ಪೈಕಿ ಹತ್ತು ಗ್ರಾಮ ಪಂಚಾಯಿತಿಗಳು ನಿರ್ಣಯ ಹಿಂಪಡೆಯುತ್ತಿರುವುದಾಗಿ ಜಿಲ್ಲಾಡಳಿತಕ್ಕೆ ತಮ್ಮ ಹೇಳಿಕೆ ಸಲ್ಲಿಸಿದ್ದವು. ಅಕ್ಕಲಕೋಟ ತಾಲೂಕಿನ ಅಳಗಿ ಗ್ರಾಮ ಮಾತ್ರ ತಮ್ಮ ನಿರ್ಣಯದಿಂದ ಹಿಂದೆ ಸರಿದಿರಲಿಲ್ಲ. ಆದ್ರೆ ಬುಧವಾರ ಅಳಗಿ ಗ್ರಾಮದ ಸರಪಂಚ ಸುಗ್ಲಾಬಾಯಿ ಮಹಾಂತೇಶ ಹಾತರೆ ಅವರು ನಾವು ತೆಗೆದುಕೊಂಡಿರುವ ನಿರ್ಣಯವನ್ನು ಹಿಂಪಡೆಯುತ್ತಿದ್ದೇವೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
ಓದಿ: ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಸಿದ್ಧತೆ ಪರಿಶೀಲಿಸಿದ ಕಾಗೇರಿ