ಮುಂಬೈ (ಮಹಾರಾಷ್ಟ್ರ): ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದ ಸಾಫ್ಟ್ವೇರ್ ಇಂಜಿನಿಯರ್ವೋರ್ವ ತನ್ನ ಪತ್ನಿಯನ್ನು ಮೆಚ್ಚಿಸಲೆಂದು ಹ್ಯಾಕರ್ ಆಗಿ ಬದಲಾದ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆರೋಪಿ, 27 ವರ್ಷದ ಟೆಕ್ಕಿಯನ್ನು ಮಹಾರಾಷ್ಟ್ರದ ಮುಂಬೈನ ಪೊಲೀಸರು ಬಂಧಿಸಿದ್ದಾರೆ.
ರಾಜಾಬಾಬು ಷಾ ಎಂಬಾತನೇ ಬಂಧಿತ ಟೆಕ್ಕಿ. ಈತ ಕಳೆದ ವರ್ಷ ಸೆಪ್ಟೆಂಬರ್ 24ರ ರಜೆ ದಿನದಂದು ಮುಂಬೈನ ಪೊಲೀಸ್ ಇಲಾಖೆಯ ಪಾಸ್‌ಪೋರ್ಟ್ ಪರಿಶೀಲನಾ ಶಾಖೆಯ ಸಿಸ್ಟಮ್ ಹ್ಯಾಕ್ ಮಾಡಿದ್ದಾನೆ. ಈ ಮೂಲಕ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಮುಂದಿನ ಪರಿಶೀಲನೆಯನ್ನು ಈ ಹ್ಯಾಕರ್ ಮಾಡಿ ಮುಗಿಸಿದ್ದ. ಇದಾದ ಎರಡು ದಿನಗಳ ನಂತರ ಅಂದರೆ ಸೆ.26ರಂದು ಸಂಗತಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಲ್ಲಿನ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಹ್ಯಾಕ್ ಮಾಡಿದ್ದು ಹೇಗೆ?: ರಾಜಾಬಾಬು ಷಾ ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದ. ಇದಕ್ಕಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಇದರ ನಡುವೆ ತನ್ನ ಪತ್ನಿಯನ್ನು ಮೆಚ್ಚಿಸುವ ನಿಟ್ಟಿನಲ್ಲಿ ಆರೋಪಿ ಪಾಸ್‌ಪೋರ್ಟ್ ವ್ಯವಸ್ಥೆಯನ್ನೇ ಹೈಜಾಕ್ ಮಾಡಿದ್ದಾನೆ.
ಮೂರು ಪಾಸ್‌ಪೋರ್ಟ್ ಅರ್ಜಿಗಳು ಕ್ಲಿಯರೆನ್ಸ್‌ಗಾಗಿ ಬಾಕಿ ಉಳಿದಿದ್ದವು. ಪಾಸ್‌ಪೋರ್ಟ್ ಫೈಲ್‌ಗಳನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ನಗರ ಪೊಲೀಸ್ ಇಲಾಖೆಯ ವಿಶೇಷ ಶಾಖೆಗೆ ಕಳುಹಿಸಲಾಗಿತ್ತು. ವಿಶೇಷ ಶಾಖೆ ನಂತರ ಸ್ಥಳೀಯ ಪೊಲೀಸರಿಗೆ ಅರ್ಜಿದಾರರ ಕುರಿತು ವರದಿಯನ್ನು ಸಲ್ಲಿಸುವಂತೆ ಕೇಳಬೇಕಾಗಿತ್ತು. ಬಳಿಕ ಅದರ ಆಧಾರದ ಮೇಲೆ ಪಾಸ್‌ಪೋರ್ಟ್ ಮಂಜೂರು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಜೊತೆಗೆ ಮುಂದಿನ ಕ್ರಮಕ್ಕಾಗಿ ಪಾಸ್‌ಪೋರ್ಟ್ ಕಚೇರಿಗೆ ರವಾನಿಸಬೇಕಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ವಿದೇಶಾಂಗ ಸಚಿವಾಲಯ ಮಂಜೂರು ಮಾಡಿದ ಕ್ಲಿಯರಿಂಗ್ ಪ್ರಾಧಿಕಾರದ ಅಧಿಕಾರಿಯೊಬ್ಬರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹ್ಯಾಕ್ ಮಾಡಲಾಗಿತ್ತು. ಈ ಮೂಲಕ ಮುಂಬೈನ ಆಂಟೊಪ್ ಹಿಲ್, ಚೆಂಬೂರ್ ಹಾಗೂ ತಿಲಕ್ ನಗರದ ಮೂವರು ಮಹಿಳೆಯರ ಪಾಸ್‌ಪೋರ್ಟ್‌ಗಳ ಪೊಲೀಸ್ ಪರಿಶೀಲನೆಯನ್ನು ಪೂರ್ಣಗೊಳಿಸಲಾಗಿತ್ತು. ಇದಕ್ಕಾಗಿ ನೋಯ್ಡಾದ ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಆರೋಪಿ ಬಳಸಿದ್ದ ಎಂದು ಅವರು ಹೇಳಿದ್ದಾರೆ.
ಪತ್ನಿ ಪಾಸ್‌ಪೋರ್ಟ್‌ಗೆ ತಡೆ: ಇದರ ಕುರಿತ ತನಿಖೆಯನ್ನು ಅಪರಾಧ ವಿಭಾಗದಿಂದ ಸೈಬರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಅಂತೆಯೇ, ಡಿಸಿಪಿ ಬಿ.ರಜಪೂತ್ ನೇತೃತ್ವದಲ್ಲಿ ಎಸಿಪಿ ರಾಮಚಂದ್ರ ಲೋಟ್ಲಿಕರ್, ಇನ್ಸೆಕ್ಟರ್ ಕಿರಣ್ ಜಾಧವ್ ಮತ್ತು ಪಿಎಸ್ಐ ಪ್ರಕಾಶ್ ಗಾವ್ಲಿ ಅವರನ್ನೊಳಗೊಂಡ ತಂಡವು ತಾಂತ್ರಿಕ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ ಗಾಜಿಯಾಬಾದ್‌ನಲ್ಲಿ ಆರೋಪಿ ರಾಜಾಬಾಬುನನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಆರೋಪಿ ರಾಜಾಬಾಬು ಪತ್ನಿ ಸಲ್ಲಿಸಿದ ದಾಖಲೆಗಳು ಸರಿಯಾಗಿವೆ. ಇದರಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಎಫ್‌ಐಆರ್ ದಾಖಲಾದ ಪಾಸ್‌ಪೋರ್ಟ್ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: 999999... ಸ್ಕೂಟಿಗೊಂದು ವಿಐಪಿ ನಂಬರ್, ಇದು ಕೋಟಿ ಕೊಟ್ರೂ ಸಿಗಲ್ಲ!