ಕೊಟ್ಟಾಯಂ(ಕೇರಳ): ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ತಾಯಿ, ಹಕ್ಕುಗಳ ಹೋರಾಟಗಾರ್ತಿ ಮೇರಿ ರಾಯ್(89) ಅವರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಇಂದು ನಿಧನರಾದರು. ಶಿಕ್ಷಣತಜ್ಞೆಯಾಗಿದ್ದ ಇವರು, ಕ್ರಿಶ್ಚಿಯನ್ ಆನುವಂಶಿಕ ಕಾನೂನಿನಲ್ಲಿ ಲಿಂಗ ಪಕ್ಷಪಾತದ ವಿರುದ್ಧ ನಡೆಸಿದ ಯಶಸ್ವಿ ಕಾನೂನು ಹೋರಾಟದಿಂದ ಹೆಸರುವಾಸಿಯಾಗಿದ್ದರು.
ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದ ಮೇರಿ ರಾಯ್ ಅವರು, 1980 ರ ದಶಕದಲ್ಲಿ ತಿರುವಾಂಕೂರ್ ಕ್ರಿಶ್ಚಿಯನ್ ಉತ್ತರಾಧಿಕಾರ ಕಾಯ್ದೆ ಅಂಶಗಳನ್ನು ಉಲ್ಲೇಖಿಸಿ ತನ್ನ ತಂದೆಯ ಮರಣದ ನಂತರ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ಕಾನೂನು ಹೋರಾಟ ನಡೆಸಿದರು.
ಸಮಾನ ಆಸ್ತಿ ಕೋರಿ ಸಲ್ಲಿಸಲಾದ ಅವರ ಅರ್ಜಿಯನ್ನು ಕೇರಳದ ಕೆಳ ಹಂತದ ನ್ಯಾಯಾಲಯ ತಿರಸ್ಕರಿಸಿತು. ಬಳಿಕ ಅವರು ಇದರ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಮೇರಿ ರಾಯ್ ಅವರ ಈ ನಡೆಯನ್ನು ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತು.
ಬಳಿಕ 1986 ರಲ್ಲಿ ಪೂರ್ವಜರ ಆಸ್ತಿಯಲ್ಲಿ ಮಹಿಳೆಗೂ ಸಮಾನ ಪಾಲು ನೀಡಬೇಕು ಎಂದು ಕೋರ್ಟ್ ಇವರ ಪರವಾಗಿ ತೀರ್ಪು ನೀಡಿತು. ಇದು ಆ ಕಾಲಘಟ್ಟದಲ್ಲಿ ಅತಿ ಮಹತ್ವದ ತೀರ್ಪಾಗಿತ್ತು. ಇದರ ವಿರುದ್ಧ ಹೋರಾಡಿ ಗೆದ್ದ ಮೇರಿ ರಾಯ್ ಅವರು ಪ್ರಖ್ಯಾತಿ ಪಡೆದರು. ಮಹಿಳಾ ಹಕ್ಕುಗಳಿಗಾಗಿ ಅವರು ಪ್ರಬಲ ಹೋರಾಟ ನಡೆಸಿದರು.
ಮೇರಿ ರಾಯ್ ಅವರು 1967 ರಲ್ಲಿ ತಮ್ಮ ತವರು ಜಿಲ್ಲೆ ಕೊಟ್ಟಾಯಂನಲ್ಲಿ 'ಪಲ್ಲಿಕೂಡಮ್' (ಶಾಲೆಗಾಗಿ ಮಲಯಾಳಂ ಪದ) ಎಂಬ ಶಾಲೆಯನ್ನು ಶಾಲೆಯನ್ನು ಆರಂಭಿಸಿದರು. ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ಅಲ್ಲದೇ ಅವರು ಲಲಿತ್ ರಾಯ್ ಎಂಬ ಮಗನನ್ನು ಅಗಲಿದ್ದಾರೆ.