ನವದೆಹಲಿ: ಸ್ಪೈಸ್ಜೆಟ್ ವಿಮಾನದಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಬಲವಂತ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾ ಎಂಬಾತನ ಮೇಲೆ ದೆಹಲಿ ಪೊಲೀಸರು ಕೇಸು ಜಡಿದಿದ್ದಾರೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಮಾನದೊಳಗೆ ರಾಜಾರೋಷವಾಗಿ ಈತ ಸಿಗರೇಟ್ ಸೇದುತ್ತಿರುವ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಇದೀಗ ಭದ್ರತೆ ಮತ್ತು ಸುರಕ್ಷತೆ ನಿಯಮಗಳ ಉಲ್ಲಂಘನೆಯಡಿ ಆರೋಪಿಯ ವಿರುದ್ಧ ಕೇಸ್ ದಾಖಲಾಗಿದೆ.
ಸ್ಪೈಸ್ಜೆಟ್ ಸಂಸ್ಥೆಯ ಕಾನೂನು ಮತ್ತು ವ್ಯವಹಾರ ವಿಭಾಗದ ಮ್ಯಾನೇಜರ್ ಜಸ್ಬೀರ್ ಸಿಂಗ್ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. 2022ರ ಜನವರಿ ತಿಂಗಳಲ್ಲಿ ದುಬೈಯಿಂದ ದೆಹಲಿಯಿಂದ ಬರುತ್ತಿದ್ದ ಎಸ್ಜಿ 706 ವಿಮಾನದಲ್ಲಿ ಲೈಟರ್ ಬಳಸಿ ಈತ ಸಿಗರೇಟ್ ಸೇದಿದ್ದಾನೆ. ನಂತರ ಇದರ ವಿಡಿಯೋ ಮತ್ತು ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯು ಬಾಡಿಬಿಲ್ಡರ್ ಕೂಡಾ ಆಗಿದ್ದು ಇನ್ಸ್ಟಗ್ರಾಮ್ನಲ್ಲಿ 6.3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾನೆ.
ಇದನ್ನೂ ಓದಿ: ವಿಮಾನದಲ್ಲಿ ಬಿಂದಾಸ್ ಸಿಗರೇಟ್ ಸೇದಿದ ಪ್ರಯಾಣಿಕ: ತನಿಖೆಗೆ ಆದೇಶಿಸಿದ ಸಚಿವ ಸಿಂಧಿಯಾ