ನವ ದೆಹಲಿ: ಕೇರಳದಿಂದ ದುಬೈಗೆ ಶನಿವಾರ ಬಂದಿಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಹಾವು ಕಂಡುಬಂದಿದೆ. ಇದು ಸಿಬ್ಬಂದಿಯಲ್ಲಿ ಅಚ್ಚರಿ ಉಂಟುಮಾಡಿದ್ದಲ್ಲದೇ, ಘಟನೆಯ ಬಗ್ಗೆ ತನಿಖೆಗೆ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಸೂಚಿಸಿದೆ.
ಬಿ737- 800 ವಿಮಾನವು ಕೇರಳದ ಕ್ಯಾಲಿಕಟ್‌ನಿಂದ ದುಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ಬಳಿಕ ಕಾರ್ಗೋ ವಿಭಾಗದಲ್ಲಿನ ವಸ್ತುಗಳನ್ನು ಇಳಿಸುವಾಗ ಸಿಬ್ಬಂದಿಗೆ ಹಾವು ಕಾಣಿಸಿದೆ. ಭಯಗೊಂಡ ಸಿಬ್ಬಂದಿ ತಕ್ಷಣ ಅಗ್ನಿಶಾಮಕದ ದಳಕ್ಕೆ ಮಾಹಿತಿ ನೀಡಿದ್ದಾರೆ. ಹಾವನ್ನು ಸುರಕ್ಷಿತವಾಗಿ ಹಿಡಿದು ವಿಮಾನವನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಆತಂಕವ್ಯಕ್ತಪಡಿಸಿರುವ ಡಿಜಿಸಿಎ, ವಿಮಾನದಲ್ಲಿ ಹಾವು ಕಂಡುಬಂದಿದ್ದು ಕರ್ತವ್ಯಲೋಪವಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಏರ್ ಇಂಡಿಯಾ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಮಸಿ: ಮೂವರು ಪೊಲೀಸ್ ವಶಕ್ಕೆ