ವಾರಣಾಸಿ: ಪಂಜಾಬ್‌ನ ಅಮೃತಸರದ ಅಜ್ನಾಲಾ ಪಟ್ಟಣದ ಬಾವಿಯಲ್ಲಿ ಪತ್ತೆಯಾಗಿದ್ದ ನೂರಾರು ಮಾನವರ ಅವಶೇಷಗಳ ಹಿನ್ನೆಲೆಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಪತ್ತೆಯಾದ ಅವಶೇಷಗಳು 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದ 246 ಭಾರತೀಯ ಸೈನಿಕರದ್ದು ಎಂದು ಡಿಎನ್‌ಎ ಆಧಾರಿತ ಪುರಾವೆಗಳು ದೃಢಪಡಿಸಿವೆ.
ಗುರುವಾರ ಫ್ರಾಂಟಿಯರ್ಸ್ ಇನ್ ಜೆನೆಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಂತೆ, ಪತ್ತೆಯಾದ ಮಾನವನ ಅವಶೇಷಗಳು ಬ್ರಿಟಿಷ್ ಇಂಡಿಯನ್ ಆರ್ಮಿಯ 26ನೇ ಬೆಂಗಾಲ್ ಇನ್‌ಫಾಂಟ್ರಿ ರೆಜಿಮೆಂಟ್‌ನ ಸೈನಿಕರದ್ದು ಎಂದು ಇತಿಹಾಸಕಾರರು ಗುರುತಿಸಿದ್ದಾರೆ.
ಸಂಶೋಧಕರ ಪ್ರಕಾರ, ಪಂಜಾಬ್‌ನ (ಪ್ರಸ್ತುತ ಪಾಕಿಸ್ತಾನದಲ್ಲಿದೆ) ಮಿಯಾನ್ ಮಿರ್‌ನಲ್ಲಿ ನೆಲೆಸಿದ್ದ ಬಂಗಾಳದ ಪದಾತಿ ದಳದ 26ನೇ ರೆಜಿಮೆಂಟ್‌ಗೆ ಸೇರಿದ ಒಟ್ಟು 500 ಸೈನಿಕರು ದಂಗೆಯ ಸಮಯದಲ್ಲಿ ಬ್ರಿಟಿಷರ ವಿರುದ್ಧವೇ ಹೋರಾಟ ನಡೆಸಿದರು. ಇದರಿಂದ ಕೆರಳಿದ ಬ್ರಿಟಿಷ್ ಡೆಪ್ಯುಟಿ ಕಮಿಷನರ್ ಫ್ರೆಡ್ರಿಕ್ ಹೆನ್ರಿ ಕೂಪರ್ 218 ಜನರನ್ನು ಗುಂಡಿಕ್ಕಿ ಕೊಂದರು.
ಇದರಲ್ಲಿ ಬದುಕುಳಿದ 282 ಮಂದಿಯನ್ನು ಬಂಧಿಸಿ ಅಮೃತಸರದ ಅಜ್ನಾಲಾಕ್ಕೆ ಕರೆದೊಯ್ಯಲಾಯಿತು. ಬಳಿಕ 217 ಜನರನ್ನು ಗುಂಡಿಕ್ಕಲಾಯಿತು. ನಂತರ ಬಾವಿಯಲ್ಲಿ ಎಸೆಯಲಾಗಿತ್ತು. ಇನ್ನುಳಿದ 45 ಜನರನ್ನು ಜೀವಂತವಾಗಿ ಬಾವಿಯೊಳಗೆ ಹೂತು ಹಾಕಲಾಗಿತ್ತು. 2014 ರಲ್ಲಿ ಗುರುದ್ವಾರದ ಕೆಳಗೆ ಬಾವಿ ಪತ್ತೆಯಾದಾಗ ಅಧ್ಯಯನವು ಪ್ರಾರಂಭವಾಗಿತ್ತು.
ಇದನ್ನೂ ಓದಿ: ಎರಡೂವರೆ ಗಂಟೆಯಲ್ಲಿ 21 ಕಿಲೋ ಮೀಟರ್ ಓಡಿ ಸಭೆಗೆ ಹಾಜರಾದ ಡಿಐಜಿ ವಿವೇಕ್ ರಾಜ್!