ಮುಂಬೈ(ಮಹಾರಾಷ್ಟ್ರ): 64 ವರ್ಷದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಹೀನ ಕೃತ್ಯ ಈಶಾನ್ಯ ಮುಂಬೈನ ಟ್ರಾಂಬೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯ ವಿವರ: ಸಂತ್ರಸ್ತೆಯ ಮಗಳು ನೀಡಿರುವ ದೂರಿನ ಆಧಾರದ ಪ್ರಕಾರ ಘಟನೆ ಕುರಿತು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. "ಮಹಿಳೆಯು ಸೋಮವಾರ ರಾತ್ರಿ ಕುರ್ಲಾದ ನೆಹರು ನಗರ ಪ್ರದೇಶದ ಸಮೀಪದ ಖಂಡೋಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ಅಲ್ಲಿದ್ದ ಅಪರಿಚಿತ ಮೂವರು ವ್ಯಕ್ತಿಗಳು ಅಪಹರಿಸಿ ಬಲವಂತವಾಗಿ ಟ್ರಾಂಬೆಯ ಥಾಣೆ ಕ್ರೀಕ್ ಬಳಿಯ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಯ ಮೇಲೆ ಮೂವರು ಅತ್ಯಾಚಾರ ಎಸಗಿ, ಮುಖ, ತಲೆ ಮತ್ತು ಖಾಸಗಿ ಭಾಗ, ಕೈಕಾಲಿಗೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು. ಇದರಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ ಆರೋಪಿಗಳು ಆಕೆಯನ್ನು ಕತ್ತಲ ನಿರ್ಜನ ಪ್ರದೇಶದಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಮಂಗಳವಾರ(ನಿನ್ನೆ) ಮುಂಜಾನೆ 5 ಗಂಟೆ ಸಮಯಕ್ಕೆ ಅಲ್ಲಿನ ಸ್ಥಳೀಯ ಮಹಿಳೆಯೊಬ್ಬರು ಸಂತ್ರಸ್ತ ಮಹಿಳೆಯನ್ನು ಬೆತ್ತಲಾಗಿ, ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ಧರಿಸಲು ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂತ್ರಸ್ತೆಯ ಮಗಳು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಘಾಟ್‌ಕೋಪರ್‌ನಲ್ಲಿರುವ ಬಿಎಂಸಿಯ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಾಯಗಳಾಗಿರುವುದರಿಂದ ಸಿಟಿ ಸ್ಕ್ಯಾನ್ ಮಾಡಲಾಗುವುದು ಎಂದು ಟ್ರಾಂಬೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದು ಆತನ ಸಹಚರರ ಮಾಹಿತಿಗಾಗಿ ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತ ವಿಧವಾ ಮಹಿಳೆ ಆಕೆಯ ಮಗಳು ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದು, ಮೀನು ಮತ್ತು ಪೊರಕೆಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ: ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ.. ಪತ್ನಿ ಕೊಂದ ಪತಿಯ ಬಂಧನ
ಇತ್ತೀಚಿನ ಅತ್ಯಾಚಾರ ಪ್ರಕರಣ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ತನ್ನ ಸಹಪಾಠಿ ವಿದ್ಯಾರ್ಥಿಯೊಂದಿಗೆ ಶಾಲೆಯಿಂದ ಮನೆಗೆ ತೆರಳುವ ವೇಳೆ ಆರೋಪಿ ಇಬ್ಬರನ್ನೂ ದಾರಿಯಲ್ಲಿ ತಡೆದು ನಿಲ್ಲಿಸಿದ್ದರು. ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.