ಫರಿದಾಬಾದ್ (ಹರಿಯಾಣ): ಗುರುವಾರ ತಡರಾತ್ರಿ ಫರಿದಾಬಾದ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಫರಿದಾಬಾದ್-ಗುರಗಾಂವ್ ರಸ್ತೆಯಲ್ಲಿ ವೇಗವಾಗಿ ಬಂದ ಡಂಪರ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪಲ್ವಾಲ್‌ನ ಕ್ಯಾಂಪ್ ಮತ್ತು ಜವಾಹರ್ ನಗರದ ನಿವಾಸಿಗಳಾದ ಪುನೀತ್, ಜತಿನ್, ಆಕಾಶ್, ಸಂದೀಪ್, ಬಲ್ಜಿತ್ ಮತ್ತು ವಿಶಾಲ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಯುವಕರ 18 ರಿಂದ 25 ವರ್ಷದವರು ಎಂದು ಹೇಳಲಾಗಿದೆ. ಈ ಎಲ್ಲಾ ಯುವಕರು ಪಲ್ವಾಲ್ ನಿವಾಸಿಗಳು. ತಮ್ಮ ಸ್ನೇಹಿತ ಹುಟ್ಟುಹಬ್ಬ ಆಚರಿಸಲು ಕಾರಿನಲ್ಲಿ ಹೊರಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾರುತಿ ಆಲ್ಟೊ ಕಾರಿನಲ್ಲಿ ಗುರ್ಗಾಂವ್‌ನಿಂದ ಫರಿದಾಬಾದ್‌ಗೆ ಬರುತ್ತಿದ್ದಾಗ ಗ್ರಾಮದ ಪಾಲಿ ಬಳಿ ವೇಗವಾಗಿ ಬಂದ ಡಂಪರ್ ಅವರ ಕಾರಿಗೆ ಮುಂಭಾಗದಿಂದ ಡಿಕ್ಕಿ ಹೊಡೆದು. ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಡಂಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಅಪಘಾತದ ನಂತರ ಜಮಾಯಿಸಿದ ಜನರು ಎಲ್ಲಾ ಯುವಕರನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರ ಮೃತದೇಹಗಳನ್ನು ಪಡೆದು ಮರಣೋತ್ತರ ಪರೀಕ್ಷೆಗಾಗಿ ಬಾದಶಾಖಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾದಶಾಖಾನ್ ಆಸ್ಪತ್ರೆಗೆ ಆಗಮಿಸಿದ ಮೃತ ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತೊಂದೆಡೆ ಹರಿಯಾಣದಲ್ಲಿ ಇಂದು ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಪಾಣಿಪತ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಮೃತಪಟ್ಟು 16 ಮಂದಿ ಗಾಯಗೊಂಡಿದ್ದರು.
ಮೂವರು ಕಾರ್ಮಿಕರ ದುರ್ಮರಣ: ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯ ಕೊಲ್ಲೂರಿನಲ್ಲಿ ನಿನ್ನೆ ಬೆಳಗಿನ ಜಾವ 4 ಗಂಟೆಗೆ ಗುಡಿಸಲಿನ ಮೇಲೆ ಲಾರಿ ಹರಿದಿತ್ತು. ಇದರಿಂದ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದು ಬಂದಿದೆ. ಹೊರ ವರ್ತುಲ ರಸ್ತೆಯುದ್ದಕ್ಕೂ ಇರುವ ಗಿಡಗಳಿಗೆ ನೀರುಣಿಸಲು ಕರ್ನಾಟಕದ ಮೂಲದ ಕೆಲವರು ಎಚ್‌ಎಂಡಿಎ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೊಲ್ಲೂರು ಜಂಕ್ಷನ್ ಬಳಿ ರಿಂಗ್ ರಸ್ತೆ ಮತ್ತು ಸವೀಸ್ ರಸ್ತೆ ಪಕ್ಕ ತಾತ್ಕಾಲಿಕ ಗುಡಿಸಲುಗಳಲ್ಲಿ ಇವರೆಲ್ಲರೂ ವಾಸಿಸುತ್ತಿದ್ದಾರೆ. ಲಾರಿ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ. ಮಿಯಾಪುರ ಎಸಿಪಿ ನರಸಿಂಹರಾವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ನಿದ್ದೆಯಲ್ಲಿದ್ದವರ ಮೇಲೆ ಹರಿದ ಲಾರಿ: ತೆಲಂಗಾಣದಲ್ಲಿ ಕರ್ನಾಟಕದ ಮೂವರು ಕಾರ್ಮಿಕರ ದುರ್ಮರಣ