ಲೂಧಿಯಾನ(ಪಂಜಾಬ್): ಲೂಧಿಯಾನ ಜಿಲ್ಲೆಯ ಗಿಲ್ ಕೆನಾಲ್ ಸೇತುವೆ ಬಳಿ ಮಂಗಳವಾರ ತನ್ನ ಕುಟುಂಬದೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿಷೇಧಿತ ಗಾಳಿಪಟದ ದಾರ ಕುತ್ತಿಗೆ ಸೀಳಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇಶಾರ್ ನಗರದ ನಿವಾಸಿ ದಕ್ಷ್ ಗಿರಿ (6) ಮೃತ ಬಾಲಕ.
ಬಾಲಕ ಎಲ್ ಕೆಜಿ ತರಗತಿಯಲ್ಲಿ ಓದುತ್ತಿದ್ದು, ತಂದೆ ಧ್ರುವ ಗಿರಿ ಆಟೋ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಕುಟುಂಬ ಸಮೇತ ಸ್ಕೂಟರ್‌ನಲ್ಲಿ ದುಗ್ರಿಗೆ ಹೋಗುತ್ತಿದ್ದರು. ಗಿಲ್ ಕಾಲುವೆ ಸೇತುವೆ ಬಳಿ ತಲುಪಿದಾಗ ಪ್ಲಾಸ್ಟಿಕ್ ಗಾಳಿಪಟ ದಾರ ಬಾಲಕನ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಅವನ ಕತ್ತು ಸೀಳಿತು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಬಾಲಕನ ತಂದೆ ಧ್ರುವ ಗಿರಿ ತಿಳಿಸಿದ್ದಾರೆ.
ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಅಪರಿಚಿತರ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 304 - ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುಪ್ರೀತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಶವ ಪತ್ತೆ