ಆಗ್ರಾ(ಉತ್ತರ ಪ್ರದೇಶ): ಸಾಮಾನ್ಯವಾಗಿ ಮದುವೆ ಕಾರ್ಯಕ್ರಮದಲ್ಲಿ ವರದಕ್ಷಿಣೆ ವಿಚಾರ ಅಥವಾ ಕುಟುಂಬಗಳಲ್ಲಿನ ಇನ್ನಿತರ ಕಾರಣಗಳಿಗಾಗಿ ಜಗಳ, ಹೊಡೆದಾಟ ಉಂಟಾಗುವುದು ಸಹಜ. ಆದರೆ ರಸಗುಲ್ಲಾಕ್ಕೋಸ್ಕರ ಹೊಡೆದಾಟ ನಡೆದಿರುವುದು ಕೇಳಿದ್ದೀರಾ?. ಅಚ್ಚರಿಯಾದರೂ ಹೌದು. ಉತ್ತರ ಪ್ರದೇಶದ ಆಗ್ರಾದಲ್ಲಿ ಮದುವೆ ಊಟದಲ್ಲಿ ರಸಗುಲ್ಲಾ ಕಡಿಮೆಯಾಗಿದೆ ಎಂದು ಹೊಡೆದಾಡಿ 6 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಮಧ್ಯರಾತ್ರಿ ಶಂಸಾಬಾದ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಬ್ರಿಜ್ಭಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮವಿತ್ತು. ಎಲ್ಲರೂ ಸಂಭ್ರಮದಿಂದ ಊಟ ಮಾಡಿದ್ದಾರೆ. ಆದರೆ ಭೋಜನದಲ್ಲಿ ರಸಗುಲ್ಲಾದ ಕೊರತೆ ಬಗ್ಗೆ ವ್ಯಕ್ತಿಯೋರ್ವ ಕಾಮೆಂಟ್ ಮಾಡಿದ್ದಾನೆ. ಇದೇ ವಿಚಾರಕ್ಕೆ ಸಮಾರಂಭದಲ್ಲಿ ಹೊಡೆದಾಟ ನಡೆದಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿ ಎಂದು ಶಂಸಾಬಾದ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅನಿಲ್ ಶರ್ಮಾ ಮಾಹಿತಿ ನೀಡಿದರು.
ಭಗವಾನ್ ದೇವಿ, ಯೋಗೇಶ್, ಮನೋಜ್, ಕೈಲಾಶ್, ಧರ್ಮೇಂದ್ರ ಮತ್ತು ಪವನ್ ಘಟನೆಯಲ್ಲಿ ಗಾಯಗೊಂಡವರು. ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಎತ್ಮಾದ್‌ಪುರದಲ್ಲಿ ಮದುವೆ ಕಾರ್ಯಕ್ರಮದಲ್ಲೇ ಸಿಹಿತಿಂಡಿ ಕೊರತೆ ವಿಚಾರದ ಜಗಳದಲ್ಲಿ ಓರ್ವ ವ್ಯಕ್ತಿಯನ್ನೇ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಯುವತಿಯ ಅಪಹರಣ: ನೆರವಿಗೆ ಧಾವಿಸದ ಜನ- ವಿಡಿಯೋ