ಪುಣೆ (ಮಹಾರಾಷ್ಟ್ರ): ನೈಜೀರಿಯಾದಿಂದ ಮಹಾರಾಷ್ಟ್ರದ ಪುಣೆಗೆ ಬಂದಿದ್ದ ಆರು ಮಂದಿಗೆ ಒಮಿಕ್ರಾನ್ ಅಂಟಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಮಾಹಿತಿ ನೀಡಿದೆ.
44 ವರ್ಷದ ಮಹಿಳೆ ಒಬ್ಬರು ನವೆಂಬರ್ 24ರಂದು ತನ್ನ ಇಬ್ಬರು ಸಹೋದರರು, ಓರ್ವ ಸಹೋದರನ ಇಬ್ಬರು ಮಕ್ಕಳ ಜೊತೆ ಪುಣೆಯ ಪಿಂಪ್ರಿ ಚಿಂಚ್ವಾಡ್ಗೆ ಬಂದಿದ್ದರು. ಈ ಐವರಿಗೆ ಹಾಗೂ ಪುಣೆಗೆ ಬಂದಿದ್ದ 47 ವರ್ಷದ ವ್ಯಕ್ತಿ ಸೇರಿ ಒಟ್ಟು ಆರು ಮಂದಿಗೆ ಹೊಸ ರೂಪಾಂತರಿ ವಕ್ಕರಿಸಿದೆ.
ರಾಜಸ್ಥಾನದಲ್ಲಿ 9 ಜನರಿಗೆ ವಕ್ಕರಿಸಿದ ಒಮಿಕ್ರಾನ್
ಇತ್ತ ರಾಜಸ್ಥಾನದಲ್ಲಿ ಒಮ್ಮೆಲೆ ಒಮಿಕ್ರಾನ್ ಸ್ಪೋಟಿಸಿದ್ದು, ಒಂದೇ ಕುಟುಂಬದ 9 ಮಂದಿಗೆ ಹೊಸ ರೂಪಾಂತರಿ ವಕ್ಕರಿಸಿದೆ. ಇವರೆಲ್ಲರೂ ದಕ್ಷಿಣಾ ಆಫ್ರಿಕಾದಿಂದ ಜೈಪುರಕ್ಕೆ ಹಿಂದಿರುಗಿದ್ದರು.
ಭಾರತದ ಒಮಿಕ್ರಾನ್ ಕೇಸ್
ದಕ್ಷಿಣಾ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಒಮಿಕ್ರಾನ್ ಬಳಿಕ 38 ರಾಷ್ಟ್ರಗಳಿಗೆ ಹರಡಿದೆ. ಡಿಸೆಂಬರ್ 2 ರಂದು ಭಾರತದ ಮೊದಲೆರಡು ಕೇಸ್ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಇದೀಗ ರಾಜಸ್ಥಾನದಲ್ಲಿ 9, ಗುಜರಾತ್ನಲ್ಲಿ 1, ಮಹಾರಾಷ್ಟ್ರ 8 ಹಾಗೂ ದೆಹಲಿಯಲ್ಲಿ 1 ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 21 ಮಂದಿಗೆ ಅಂಟಿದಂತಾಗಿದೆ.
ಇದನ್ನೂ ಓದಿ: Omicron ಪತ್ತೆ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ : ಸೋಂಕಿತರ ಸಂಪರ್ಕದಲ್ಲಿದ್ದವರ ಸ್ಯಾಂಪಲ್ಸ್ ಸಂಗ್ರಹ
ಒಮಿಕ್ರಾನ್ ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತದೆ. ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಹೇಳಲಾಗ್ತಿದೆ. ಇದರ ವಿರುದ್ಧ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಲಾಗುತ್ತಿದೆ. ಇದುವರೆಗೆ ಒಮಿಕ್ರಾನ್‌ನಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ) ಸ್ಪಷ್ಟಪಡಿಸಿದೆ.