ರಾಂಚಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸೋಮವಾರ ನವದೆಹಲಿಗೆ ಕಳುಹಿಸಲಾಗುತ್ತಿದ್ದ ಆರು ಬಾಲಕಿಯರನ್ನು ರೈಲ್ವೆ ಸಂರಕ್ಷಣಾ ಪಡೆಯ (ಆರ್‌ಪಿಎಫ್) 'ನನ್ಹೆ ಫರಿಸ್ಥೆ' ತಂಡ ರಕ್ಷಿಸಿದೆ.
ಬಾಲಕಿಯರ ಕಳ್ಳಸಾಗಣೆ ತಡೆಯಲೆಂದೇ ಆರ್‌ಪಿಎಫ್ 'ನನ್ಹೆ ಫರಿಸ್ಥೆ' ವಿಶೇಷ ತಂಡವನ್ನು ರಚಿಸಿದ್ದು, ಅದರಂತೆ ಇಂದು ಕದ್ದುಮುಚ್ಚಿ ಕಳುಹಿಸಲಾಗುತ್ತಿದ್ದ ಬಾಲಕಿಯರನ್ನು ತಂಡ ರಕ್ಷಿಸಿದೆ. ಇಂದು ರಕ್ಷಿಸಲ್ಪಟ್ಟ ಆರು ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಚೈಲ್ಡ್ಲೈನ್ ಮೂಲಕ ರಾಂಚಿ ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆಯ ಬಳಿಕ ಅವರನ್ನು ತಮ್ಮ ಮನೆಗಳಿಗೆ ಅಥವಾ ಸರ್ಕಾರಿ ಸಂಸ್ಥೆಗೆ ಕಳುಹಿಸಲಾಗುತ್ತದೆ ಎಂದು ರೈಲ್ವೆ ಸಂರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹತ್ತಲು ಬಾಲಕಿಯರು ಯಾರಿಗೋ ಕಾಯುತ್ತಿದ್ದರು. ನನ್ಹೆ ಫರಿಸ್ಥೆ ತಂಡ ಅನುಮಾನ ವ್ಯಕ್ತಪಡಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರೊಂದಿಗೆ ಯಾರೂ ಬಂದಿರಲಿಲ್ಲ. ಆದರೆ ಅವರು ಯಾರಿಗಾಗಿ ಕಾಯುತ್ತಿದ್ದರು ಅನ್ನೋದು ತಿಳಿದು ಬಂದಿಲ್ಲ. ನನ್ಹೆ ಫರಿಸ್ಥೆ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಮಾನವ ಕಳ್ಳ ಸಾಗಾಣಿಕೆ: ಮೋಸದ ಬಲೆಯಲ್ಲಿ ಅಮಾಯಕ ಜೀವಗಳು
ಅವರನ್ನು ಕೂಲಿ ಕೆಲಸಕ್ಕಾಗಿ ನವದೆಹಲಿಗೆ ಕಳುಹಿಸಲಾಗುತ್ತಿತ್ತು. ನವದೆಹಲಿಯಲ್ಲಿ ಎಲ್ಲಿಗೆ ಹೋಗಬೇಕು ಎಂದು ಹುಡುಗಿಯರಿಗೆ ತಿಳಿದಿರಲಿಲ್ಲ. ರಕ್ಷಿಸಿದವರಲ್ಲಿ ನಾಲ್ವರು ಖುತಿ ಜಿಲ್ಲೆಗೆ ಸೇರಿದವರು ಮತ್ತು ಒಬ್ಬರು ಸಿಮ್ಡೆಗಾ, ಮತ್ತೊಬ್ಬರು ಗುಮ್ಲಾ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ ಎಂದು ರಾಂಚಿ ಆರ್‌ಪಿಎಫ್‌ನ ಉಸ್ತುವಾರಿ ಅಮಿತಾಬ್ ಆನಂದ್ ಬರ್ಧನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.