ಸೊಲ್ಲಾಪುರ (ಮಹಾರಾಷ್ಟ್ರ): ಸಿಮೆಂಟ್ ಟ್ಯಾಂಕರ್ ಮತ್ತು ಕ್ರೂಸರ್ ವಾಹನ ನಡುವೆ ಡಿಕ್ಕಿ ಸಂಭವಿಸಿ ಕರ್ನಾಟಕದ ಕಲಬುರಗಿ ಮೂಲದ ಆರು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ಬಳಿ ಇಂದು ಸಂಜೆ ನಡೆದಿದೆ. ಇತರ ಹತ್ತು ಮಂದಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿಗಳು ಕ್ರೂಸರ್ ವಾಹನದಲ್ಲಿ ಅಕ್ಕಲಕೋಟೆಯ ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ದರ್ಶನ ಪಡೆದು ಮರಳಿ ವಾಪಸ್ಸಾಗುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಇಲ್ಲಿನ ಶೀರ್ವಾಲವಾಡಿ ಕ್ರಾಸ್ನಲ್ಲಿ ಕ್ರೂಸರ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಹತ್ತು ಮಂದಿಗೆ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನಾಗರಿಕರು ಸ್ಥಳಕ್ಕೆ ಧಾವಿಸಿದರು. ನಂತರ ಅಕ್ಕಲಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಅಕ್ಕಲಕೋಟೆ ಉತ್ತರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ, ಗಾಯಾಳುಗಳನ್ನು ಅಕ್ಕಲಕೋಟೆ ಗ್ರಾಮಾಂತರ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳನ್ನು ಸುಮಿತ್ ಪೂಜಾರಿ, ರೇಖಾ ಗೋವಿಂದ ಪೂಜಾರಿ, ಗೋಪಾಲ ಪೂಜಾರಿ, ವಿಠ್ಠಲ್ ನಾನವರೆ, ಅಜಿತ್ ಕುಂಡಾಳೆ, ನಾಗೇಶ ಕುಂಡಾಳೆ, ಕಲ್ಪನಾ ಕುಂಡಾಳೆ, ಅಶೋಕ್ ಕುಂಡಾಳೆ, ಕೋಮಲ್ ಶಾಮಂಡೆ ಹಾಗೂ ಸುನೀಲ್ ಪಾಂಚಾಲ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹೊಸಪೇಟೆ ಸಮೀಪ ಭೀಕರ ರಸ್ತೆ ಅಪಘಾತ: 7 ಜನ ಸ್ಥಳದಲ್ಲೇ ಸಾವು
ಮತ್ತೊಂದೆಡೆ, ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಸಹ ಇಂದು ಭೀರಕ ರಸ್ತೆ ಅಪಘಾತ ನಡೆದಿದೆ. ವಡ್ಡರಹಳ್ಳಿ ರೈಲ್ವೆ ಸೇತುವೆ ಬಳಿ ಎರಡು ಆಟೋಗಳು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ 12 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.