ಲಖನೌ(ಉತ್ತರ ಪ್ರದೇಶ) : ಹಥ್ರಾಸ್ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಸರ್ಕಾರ ಹೈಕೋರ್ಟ್ಗೆ ಸಲ್ಲಿಸಲಿದೆ.
ಸೆಪ್ಟೆಂಬರ್ 14 ರಂದು ಹಥ್ರಾಸ್‌ನ ಚಂದ್ಪಾದಲ್ಲಿ ದಲಿತ ಯುವತಿಯ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದರು. ಬಳಿಕ ಸೆಪ್ಟೆಂಬರ್ 29 ರಂದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಳು. ಆ ಬಳಿಕ ಯುವತಿಯ ಮೃತ ದೇಹವನ್ನು ರಾತ್ರೋರಾತ್ರಿ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದರು. ಇದು ದೇಶದಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಘಟನೆ ವಿರುದ್ದ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟಗಳು ನಡೆದ ಬಳಿಕ ಗೃಹ ಕಾರ್ಯದರ್ಶಿ ಭಗವಾನ್ ಸ್ವರೂಪ್ ನೇತೃತ್ವದಲ್ಲಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡ ಪ್ರತಿಯೊಂದು ಅಂಶಗಳ ಬಗ್ಗೆ ತನಿಖೆ ನಡೆಸಿ, ಸೋಮವಾರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಸರ್ಕಾರದ ಪರವಾಗಿ ಹೈಕೋರ್ಟ್ಗೆ ಸಲ್ಲಿಸಲಾಗುತ್ತದೆ.
ಯುವತಿಯ ಅಂತ್ಯ ಕ್ರಿಯೆ ವಿವಾದ.. ಜಿಲ್ಲಾಧಿಕಾರಿ ತಲೆ ಮೇಲೆ ತೂಗುಗತ್ತಿ :
ಎಸ್‌ಐಟಿಯು ಘಟನೆಯ ಪ್ರತಿಯೊಂದು ಅಂಶಗಳ ಬಗ್ಗೆ ತನಿಖೆ ನಡೆಸಿ ತನ್ನ ವರದಿಯನ್ನು 7 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ, ಬಳಿಕ ಈ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ, ಪ್ರಕರಣದ ಹಲವು ಅಂಶಗಳ ಬಗ್ಗೆ ಕೂಲಂಕಷ ವಿಚಾರಣೆ ನಡೆಯಲಿದೆ. ವರದಿಯಿಂದ ಜಿಲ್ಲಾಧಿಕಾರಿ ತಲೆ ಮೇಲೆ ತೂಗುಗತ್ತಿ ನೇತಾಡುತ್ತಿದ್ದು, ವರದಿಯಲ್ಲಿ ಜಿಲ್ಲಾಧಿಕಾರಿ ತಪ್ಪಿತಸ್ಥ ಎಂದು ಕಂಡು ಬಂದರೆ ತಲೆ ದಂಡವಾಗುವುದು ಖಚಿತವಾಗಿದೆ.