ಲಖೀಂಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಲಖೀಂಪುರ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಆರೋಪದ ಮೇಲೆ ವಿಶೇಷ ತನಿಖಾ ತಂಡ (ಎಸ್‌ಐಟಿ) 12 ರೈತರಿಗೆ ಸಮನ್ಸ್ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಇದುವರೆಗೆ ಏಳು ರೈತರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ. ಘಟನಾ ಸ್ಥಳದಲ್ಲಿ ಇದ್ದ ಮತ್ತು ಗುಂಪಿನಲ್ಲಿದ್ದ ರೈತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಮನ್ಸ್ ಜಾರಿ ಮಾಡಿದ್ದೇವೆ, ಕೆಲವರು ನಮ್ಮ ಮುಂದೆ ಹಾಜರಾದರು, ಆದರೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಎಸ್‌ಐಟಿ ಸದಸ್ಯರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಚಾಂದಿನಿ ಚೌಕ್ನಲ್ಲಿ ಬೆಂಕಿ ಅವಘಡ.. 100ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ!
ರೈತರ ಪರ ವಾದ ಮಂಡಿಸಿದ ವಕೀಲ ಹರ್ಜೀತ್ ಸಿಂಗ್, ಹಿಂದೆ ಕೆಲವು ರೈತರನ್ನು ವಿಚಾರಣೆಗೆ ಕರೆಯಲಾಗಿತ್ತು, ಆದರೆ, ಅವರು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ಕಾರು ರೈತರು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಕೋಪಗೊಂಡ ರೈತರು ಪ್ರತೀಕಾರವಾಗಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಕೊಲೆಗೈದಿದ್ದಾರೆಂಬ ಆರೋಪವಿದೆ. ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.