ಹರಿದ್ವಾರ: "ಕುಂಭ ಕೋವಿಡ್ ಟೆಸ್ಟ್ ಹಗರಣ"ಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಶರದ್ ಪಂತ್ ಹಾಗೂ ಮಲ್ಲಿಕಾ ಪಂತ್ರನ್ನು ದೆಹಲಿಯಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಅವರನ್ನು ಶೀಘ್ರವೇ ಹರಿದ್ವಾರಕ್ಕೆ ಕರೆತಲಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ನಡೆದ ಕುಂಭಮೇಳದಲ್ಲಿ ಭಾರಿ ಕೋವಿಡ್ ನಕಲಿ ಟೆಸ್ಟ್ ಹಗರಣ ಬೆಳಕಿಗೆ ಬಂದಿತ್ತು. ಕುಂಭಮೇಳದಲ್ಲಿ ಭಾಗಿಯಾಗಿದ್ದ 1.10 ಲಕ್ಷ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್ ಪೋರ್ಟಲ್ನಲ್ಲಿ ನಮೂದಿಸಿ 4 ಕೋಟಿ ರೂಪಾಯಿ ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಿರುವ ಆರೋಪ ಕೇಳಿಬಂದಿತ್ತು.
ಟೆಸ್ಟ್ಗೆ ಒಳಗಾಗದ ವ್ಯಕ್ತಿಗಳ ಫೋನ್ ನಂಬರ್ಗೂ ನಿಮ್ಮ ವರದಿ 'ಕೊರೊನಾ ನೆಗೆಟಿವ್' ಆಗಿದೆ ಎಂದು ಸಂದೇಶ ರವಾನೆಯಾಗಿತ್ತು. ಈ ಬಗ್ಗೆ ಹಲವರು ದೂರು ನೀಡಿದ ಹಿನ್ನೆಲೆ ಕೊರೋನಾ ನಕಲಿ ಟೆಸ್ಟ್ ಹಗರಣ ಬೆಳಕಿಗೆ ಬಂದಿತ್ತು.
ಒಂದೇ ಆ್ಯಂಟಿಜನ್ ಟೆಸ್ಟ್ ಕಿಟ್ನಿಂದ 700 ಜನರಿಗೆ ಟೆಸ್ಟ್ ಮಾಡಲಾಗಿದೆ. ಪಟ್ಟಿಯಲ್ಲಿರುವ 100 ಜನರಿಗೂ ಒಂದೇ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ. ಅಲ್ಲದೇ ವಿವಿಧ ಪ್ರಯೋಗಾಲಯಗಳಿಗೆ ಬಂದ ಕೋವಿಡ್ ಟೆಸ್ಟ್ ಮಾದರಿಗಳು ನಕಲಿ ಎಂದು ಆರೋಗ್ಯ ಇಲಾಖೆ ನಡೆಸಿದ ತನಿಖೆಯಲ್ಲಿ ಬಯಲಾಗಿತ್ತು. ಇದರಿಂದ ಸರ್ಕಾರ ಹಗರಣ ತನಿಖೆ ನಡೆಸಲು ಎಸ್ಐಟಿಗೆ ವಹಿಸಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು ಮತ್ತಿಬ್ಬರನ್ನು ಬಂಧಿಸಿದ್ದಾರೆ.