ಚಮಕೌರ್(ಪಂಜಾಬ್) : ದೆಹಲಿಯ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರು ಬುಧವಾರ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಕ್ಷೇತ್ರವಾದ ಚಮಕೌರ್ ಸಾಹಿಬ್‌ನಲ್ಲಿರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ದೆಹಲಿಗಿಂತ ಉತ್ತಮ ಶಾಲೆಗಳನ್ನು ಹೊಂದಿದ್ದಾರೆ ಎಂಬ ತಮ್ಮ ಸರ್ಕಾರದ ಹೇಳಿಕೆಗಳನ್ನು ಬಹಿರಂಗಪಡಿಸಲು ದಿಢೀರ್ ಭೇಟಿ ನೀಡಿದ್ದಾರೆ.
ಸಿಸೋಡಿಯಾ ಮತ್ತು ಪಂಜಾಬ್ ಶಿಕ್ಷಣ ಸಚಿವ ಪರ್ಗತ್ ಸಿಂಗ್ ನಡುವೆ ಇತ್ತೀಚೆಗೆ ಆಯಾ ರಾಜ್ಯಗಳ ಶಿಕ್ಷಣದ ಸ್ಥಿತಿಯ ಬಗ್ಗೆ ಮಾತಿನ ಚಕಮಕಿ ನಡೆಯುತ್ತಿದೆ. ಇಬ್ಬರೂ ಸಚಿವರು ತಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರಾದ ಗೌರಿ ಲಂಕೇಶ್ ಹತ್ಯೆ ಆರೋಪಿಗಳು
ಸಿಸೋಡಿಯಾ ಅವರು ಈ ಹಿಂದೆ ದೆಹಲಿಯ 250 ಸರ್ಕಾರಿ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಅವುಗಳು ವಿದ್ಯಾರ್ಥಿಗಳಿಗೆ ಅಸಾಧಾರಣ ಸೌಲಭ್ಯಗಳನ್ನು ಹೊಂದಿವೆ. ಪಂಜಾಬ್ ಶಿಕ್ಷಣ ಸಚಿವ ಪರ್ಗತ್ ಸಿಂಗ್ ಅವರು ಇದೇ ರೀತಿ ಮಾಡುವಂತೆ ಸವಾಲು ಹಾಕಿದ್ದರು.
ಕಳೆದ ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಾಲಿಗೆ ಭೇಟಿ ನೀಡಿದ್ದರು ಮತ್ತು ಪ್ರತಿಭಟನಾನಿರತ ಶಿಕ್ಷಕರನ್ನು ಭೇಟಿ ಮಾಡಿದ್ದರು. ಆ ವೇಳೆ ಶಿಕ್ಷಕರು ನಗರದ ಸರ್ಕಾರಿ ಶಾಲೆಗಳ ಕಳಪೆ ಗುಣಮಟ್ಟದ ಬಗ್ಗೆ ಪ್ರಸ್ತಾಪಿಸಿದ್ದರು.
ಖಾಯಂ ಉದ್ಯೋಗಕ್ಕಾಗಿ ಶಿಕ್ಷಕರ ಬೇಡಿಕೆಗಳನ್ನು ಪಂಜಾಬ್ ಸರ್ಕಾರ ನಿರ್ಲಕ್ಷಿಸಿದೆ ಎಂದು ಅವರು ಅಂದು ಆರೋಪಿಸಿದ್ದರು. ಪಂಜಾಬ್ ಸರ್ಕಾರಿ ಶಾಲೆಗಳಲ್ಲಿ ಬಹುಪಾಲು ಶಿಕ್ಷಕರು ಅತಿಥಿ ಶಿಕ್ಷಕರಾಗಿದ್ದಾರೆಂದು ಕೇಜ್ರಿವಾಲ್ ಖಂಡನೆ ವ್ಯಕ್ತಪಡಿಸಿದ್ದರು.