ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೇರಿದಂತೆ ಒಂಬತ್ತು ವಿರೋಧ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿದ್ದು, ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಭಗವಂತ್ ಮಾನ್, ತೇಜಸ್ವಿ ಯಾದವ್ (ಆರ್‌ಜೆಡಿ), ಶರದ್ ಪವಾರ್ (ಎನ್‌ಸಿಪಿ), ಫಾರೂಕ್ ಅಬ್ದುಲ್ಲಾ (ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್), ಉದ್ಧವ್ ಠಾಕ್ರೆ (ಶಿವಸೇನೆ) ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಸ್ಪಷ್ಟ ದುರ್ಬಳಕೆಯು ನಾವು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಪರಿವರ್ತನೆಯಾಗುತ್ತಿದ್ದೇವೆ ಎಂಬ ಭಾವನೆ ಮೂಡಿಸುತ್ತಿದೆ. ಚುನಾವಣಾ ಕಣದಿಂದ ಹೊರಗೆ ರಾಜಕೀಯ ಮೇಲುಗೈ ಸಾಧಿಸಲು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯಪಾಲರ ಕಚೇರಿಗಳಂಥ ಸಾಂವಿಧಾನಿಕ ಕಚೇರಿಗಳ ದುರುಪಯೋಗ ಮಾಡುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಹಾಗೂ ಇಂಥ ಪ್ರಯತ್ನಗಳು ತೀವ್ರ ಖಂಡನೀಯವಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದನ್ನು ಎತ್ತಿ ತೋರಿಸಿರುವ ಪ್ರತಿಪಕ್ಷ ನಾಯಕರು, ಎಎಪಿ ನಾಯಕ ಸಿಸೋಡಿಯಾ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಪಿತೂರಿಯ ಭಾಗವಾಗಿವೆ ಎಂದು ಹೇಳಿದ್ದಾರೆ. ಸಿಸೋಡಿಯಾ ಅವರ ಬಂಧನ ದೇಶಾದ್ಯಂತ ಜನರನ್ನು ಕೆರಳಿಸಿದೆ. ದೆಹಲಿಯ ಶಾಲಾ ಶಿಕ್ಷಣವನ್ನು ಪರಿವರ್ತಿಸಿದ ಕಾರನಕ್ಕಾಗಿ ಸಿಸೋಡಿಯಾ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಬಂಧನವನ್ನು ವಿಶ್ವಾದ್ಯಂತ ರಾಜಕೀಯ ಹಿತಾಸಕ್ತಿಯ ಬಂಧನವಾಗಿ ನೋಡಲಾಗುತ್ತಿದೆ ಹಾಗೂ ಸರ್ವಾಧಿಕಾರಿ ಬಿಜೆಪಿ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಬೆದರಿಕೆಗೆ ಒಳಗಾಗುತ್ತಿವೆ ಎಂದು ಜಗತ್ತು ನಮ್ಮತ್ತ ಸಂಶಯ ಪಡುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಾಜಿ ಟಿಎಂಸಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಪ್ರತಿಪಕ್ಷ ಮುಖಂಡರು, ಬಿಜೆಪಿಗೆ ಸೇರುವ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧದ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ನಿಧಾನಗತಿಯ ತನಿಖೆ ನಡೆಸುತ್ತಿವೆ ಎಂದು ಹೇಳಿದ್ದಾರೆ. 2014 ರಿಂದ ಪ್ರತಿಪಕ್ಷ ನಾಯಕರ ವಿರುದ್ಧ ನಡೆಸಿದ ದಾಳಿಗಳು, ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವುತ್ (ಶಿವಸೇನೆ), ಅಜಂ ಖಾನ್ (ಸಮಾಜವಾದಿ ಪಕ್ಷ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ಆಗಿರಬಹುದು ಇವರೆಲ್ಲರ ವಿರುದ್ಧದ ಸೇಡಿನ ಕ್ರಮಗಳನ್ನು ನೋಡಿದರೆ ಕೇಂದ್ರ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಅಸ್ತ್ರಗಳಾಗಿ ಕೆಲಸ ಮಾಡುತ್ತಿವೆ ಎಂಬ ಅನುಮಾನ ಹುಟ್ಟು ಹಾಕುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಜಾಲತಾಣಗಳ ಬಳಕೆದಾರರು ನಿಖರತೆ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಾರೆ: ಎಂಐಟಿ ಅಧ್ಯಯನ