ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿ ಬಂದಿದ್ದ ಪಂಜಾಬಿ ಗಾಯಕ ಮಂಕಿರತ್ ಔಲಾಖ್ ಅವರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಪಂಜಾಬ್ ಪೊಲೀಸರು ಕೈಗೊಂಡ ತನಿಖೆಯಲ್ಲಿ ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಮಂಕಿರತ್ ಅವರ ಯಾವುದೇ ಪಾತ್ರ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ನಂತರ ಗ್ಯಾಂಗ್‌ಸ್ಟರ್ ದವೀಂದರ್ ಬಂಬಿಹಾ ಗುಂಪು ಹತ್ಯಾಕಾಂಡದಲ್ಲಿ ಗಾಯಕ ಮಂಕಿರತ್ ಔಲಾಖ್ ಭಾಗಿಯಾಗಿದ್ದಾನೆ ಎಂದು ಆರೋಪಿಸಿತ್ತು. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದರು. ದರೋಡೆಕೋರ ದೇವಿಂದರ್ ಬಾಂಬಿಹಾ ಗ್ಯಾಂಗ್ ಮಾಡಿದ ಆರೋಪಗಳ ನಂತರ, ಗ್ಯಾಂಗ್‌ಸ್ಟರ್ ವಿರೋಧಿ ಕಾರ್ಯಪಡೆ (ಎಜಿಟಿಎಫ್) ಎಡಿಜಿಪಿ ಪ್ರಮೋದ್ ಬಾನ್, ಪ್ರಕರಣದ ತನಿಖೆಯಲ್ಲಿ ಔಲಾಖ್ ಹೆಸರು ಕೇಳಿ ಬಂದಿಲ್ಲ. ಈ ವಿಷಯದಲ್ಲಿ ಔಲಾಖ್ ಅವರನ್ನು ಪ್ರಶ್ನಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿವರಣೆ ನೀಡಿರುವ ಗಾಯಕ ಮಂಕಿರತ್ ಔಲಾಖ್, ನನ್ನನ್ನು ಯಾರಾದರೂ ಎಷ್ಟು ಕೆಟ್ಟದಾಗಿ ಬಿಂಬಿಸಿದರೂ, ಎಷ್ಟೇ ಸುಳ್ಳು ವದಂತಿಗಳನ್ನು ಹಬ್ಬಸಿದರೂ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವರ್ಷದಿಂದ ನನಗೆ ಜೀವ ಬೆದರಿಕೆಗಳು ಬರುತ್ತಿವೆ. ಪ್ರತಿದಿನ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂತಹ ಸೂಕ್ಷ್ಮ ವಾತಾವರಣದಲ್ಲಿ ಬದುಕುವುದು ಸಾಮಾನ್ಯ ಸಂಗತಿಯಲ್ಲ. ದಯವಿಟ್ಟು ಒಂದು ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳದೆ ಯಾರನ್ನೂ ದೂಷಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಲಂಚ ಪ್ರಕರಣ: ಬೆಂಗಳೂರು ನಗರ ಡಿಸಿ ಹೇಳಿಕೆ ದಾಖಲಿಸಿಕೊಂಡ ಎಸಿಬಿ