ಪಾಟ್ನಾ(ಬಿಹಾರ) : ಯುವತಿ ಮೇಲೆ ಮೂವರು ಕಾಮುಕ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ದುಷ್ಕೃತ್ಯ ಬಿಹಾರದ ಪಾಟ್ನಾದ ರಾಮಕೃಷ್ಣ ನಗರದಲ್ಲಿ ನಡೆದಿದೆ. ಸಂತ್ರಸ್ತೆ ಸ್ಥಳೀಯ ಗಾಯಕಿಯಾಗಿದ್ದು, ಮದುವೆ, ಹುಟ್ಟುಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಜಹಾನಾಬಾದ್ ಜಿಲ್ಲೆಯವರಾದ ಯುವತಿ ಹೇಳಿಕೆ ನೀಡಿದ್ದು, ಮದುವೆ ಕಾರ್ಯಕ್ರಮದಲ್ಲಿ ಹಾಡಲು ಪಿಂಟು ಕುಮಾರ್, ಸಂಜೀವ್ ಕುಮಾರ್ ಮತ್ತು ಕರುಕುಮಾರ್ ಎಂಬುವರು ಬುಕ್ ಮಾಡಿದ್ದರು. ಆ ಮೂವರು ಹೇಳಿದ್ದ ಸ್ಥಳಕ್ಕೆ ನಾನು ತೆರಳಿದಾಗ ಅಲ್ಲಿ ಯಾವುದೇ ವಿವಾಹ ಕಾರ್ಯಕ್ರಮವಿರಲಿಲ್ಲ.
ಆದ್ದರಿಂದ ವಾಪಸ್ ಹಿಂದಿರುಗಲು ಮುಂದಾದೆ. ಆಗ ಬಂದೂಕು ತೋರಿಸಿ, ಕೋಣೆಯೊಂದಕ್ಕೆ ಕರೆದೊಯ್ದ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದರು. ಅತ್ಯಾಚಾರದ ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾನು ಹೇಗೋ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಮತ್ತೊಂದು ಕೋಣೆಗೆ ತೆರಳಿ ಒಳಗಿನಿಂದ ಬೀಗ ಹಾಕಿಕೊಂಡೆ.
ನಂತರ ಪೊಲೀಸರಿಗೆ ಕರೆ ಮಾಡಿದೆ ಎಂದು ಯುವತಿ ಹೇಳಿಕೊಂಡಿದ್ದಾರೆ. 'ನಾವು ತಕ್ಷಣ ಅಪರಾಧ ಸ್ಥಳಕ್ಕೆ ತಲುಪಿ ಸಂತ್ರಸ್ತೆಯನ್ನು ರಕ್ಷಿಸಿದ್ದೇವೆ. ಈ ಸಂಬಂಧ ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಅವರಿಂದ ಮೂರು ಕಾಟ್ರಿಡ್ಜ್ಗಳನ್ನು ವಶಕ್ಕೆ ಪಡೆದಿದ್ದೇವೆ' ಎಂದು ರಾಮಕೃಷ್ಣ ನಗರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ರವಿ ರಂಜನ್ ಮಾಹಿತಿ ನೀಡಿದರು.
ತನಿಖೆಯ ವೇಳೆ ಪಿಂಟುಕುಮಾರ್ ಸಂತ್ರಸ್ತೆಗೆ ಪರಿಚಿತನಾಗಿದ್ದ ಎಂದು ತಿಳಿದು ಬಂದಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಐಪಿಸಿಯ 376 ಡಿ (ಗ್ಯಾಂಗ್ ರೇಪ್) ಮತ್ತು 34 (ಕ್ರಿಮಿನಲ್ ಪಿತೂರಿ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ: ಚಾಮರಾಜನಗರದಲ್ಲಿ ಯುವಕನ ಕೊಲೆ