ಇಂದು ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ, ಸಡಗರ ಮನೆ ಮಾಡಿದೆ. ಶ್ರಾವಣ ಮಾಸದಲ್ಲಿ ಬರುವ ಈ ವಿಶೇಷ ಹಬ್ಬವು ಕೃಷ್ಣಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ.
ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ಕೃಷ್ಣಾವತಾರವು ಜಗತ್ತಿನ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪಂಚಾಂಗದ ಪ್ರಕಾರ, ಶ್ರೀಕೃಷ್ಣನ ಜನ್ಮದಿನದ ಆಚರಣೆ ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ ಎಂಟನೇ ದಿನ ನಡೆಯುತ್ತದೆ.
ಕೃಷ್ಣಾಷ್ಟಮಿ ಮಹತ್ವ: ಕೃಷ್ಣ, ಪುರಾಣಗಳಲ್ಲಿ ವಿಭಿನ್ನ ಅವತಾರಗಳಲ್ಲಿ ಕಂಡುಬಂದಿದ್ದಾನೆ ಎಂಬ ಉಲ್ಲೇಖವಿದೆ. ಜನರನ್ನು, ಆತನನ್ನು ನಂಬಿದ ಭಕ್ತರನ್ನು ವಿಧವಿಧವಾಗಿ ರಕ್ಷಣೆ ಮಾಡಿದ್ದಾನೆ ಎನ್ನಲಾಗುತ್ತದೆ. ಆದ್ದರಿಂದಲೇ ಆತನ ಜನ್ಮದಿನ ಅಷ್ಟಮಿಯನ್ನು ಅಚ್ಚುಕಟ್ಟಾದ ವಿಧಿ-ವಿಧಾನಗಳ ಮೂಲಕ ಆಚರಣೆ ಮಾಡಲಾಗುತ್ತದೆ. ಇಂದು ಆಸ್ತಿಕರೆಲ್ಲಾ ತಮ್ಮ ಮನೆಗಳನ್ನು ಬಗೆಬಗೆ ಹೂವು ಮತ್ತು ಆಕರ್ಷಕ ದೀಪಗಳಿಂದ ಅಲಂಕರಿಸಿ, ಮಥುರಾ ಮತ್ತು ವೃಂದಾವನದಂತೆ ಕಂಗೊಳಿಸುವಂತೆ ಮಾಡಿ ಹಬ್ಬ ಆಚರಿಸಿ ಖುಷಿ ಪಡುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಭಕ್ತಾದಿಗಳಿಂದ ವಿಶೇಷ ವ್ರತಾಚರಣೆಯೂ ನಡೆಯುತ್ತದೆ. ನಿರ್ಮಲ ಮನಸ್ಸು, ಶ್ರದ್ಧಾ ಭಕ್ತಿಯಿಂದ ಯಾರು ಶ್ರೀಕಷ್ಣನನ ಉಪಾಸನೆ ಮಾಡುತ್ತಾರೋ ಅವರ ಇಷ್ಟಾರ್ಥಗಳು ಪೂರೈಸುತ್ತವೆ ಎಂಬುದು ಜನರ ನಂಬಿಕೆ.
ಜನ್ಮಾಷ್ಟಮಿಯ ಶುಭ ಮುಹೂರ್ತ: ಹಿಂದೂ ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿಯಂದು ಶ್ರೀ ಕೃಷ್ಣ ಜನಿಸಿದ್ದರು. ಹೀಗಾಗಿ ಈ ಬಾರಿ ಆಗಸ್ಟ್ 29 ಭಾನುವಾರ ರಾತ್ರಿ 11 ಗಂಟೆ 25 ನಿಮಿಷದಿಂದ ಆಗಸ್ಟ್ 30 ಸೋಮವಾರದ ರಾತ್ರಿ 1 ಗಂಟೆ 59 ನಿಮಿಷದವರೆಗೂ ಕೃಷ್ಣ ಜನ್ಮಾಷ್ಟಮಿ ಶುಭ ಮುಹೂರ್ತ ಇದೆ. ಸೂರ್ಯೋದಯದ ಸಂದರ್ಭದಲ್ಲಿ ಜನ್ಮ ದಿನಾಚರಣೆ ಇರುವುದರಿಂದ ಆಗಸ್ಟ್ 30ರಂದು ಜನ್ಮಾಷ್ಟಮಿ ಆಚರಿಸಲ್ಪಡುತ್ತದೆ.
ರಾಜ್ಯ-ದೇಶದಲ್ಲಿ ಕೃಷ್ಣನ ಆರಾಧನೆ: ಕರ್ನಾಟಕದಲ್ಲಿ ಕೃಷ್ಣಾಷ್ಟಮಿ ಆಚರಣೆ ಎಂದರೆ ಮೊದಲಿಗೆ ನೆನಪಾಗುವುದು ಉಡುಪಿ ಕೃಷ್ಣ ಮಠ ಮತ್ತು ಬೆಂಗಳೂರಿನ ಇಸ್ಕಾನ್ ರಾಧಾಕೃಷ್ಣ ದೇವಾಲಯ. ಈಗಾಗಲೇ ಉಡುಪಿಯಲ್ಲಿ ಜನ್ಮಾಷ್ಟಮಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಲಡ್ಡು, ಚಕ್ಕುಲಿ, ಅರಳಿನ ಉಂಡೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ.
ಇನ್ನು ಅರ್ಘ್ಯ ಸಮರ್ಪಣೆ ಬಳಿಕ ಕೃಷ್ಣನಿಗೆ ಮಠದ ಶ್ರೀಗಳೇ ಕೈಯಿಂದ ಮಾಡಿರುವ ಉಂಡೆ, ಚಕ್ಕುಲಿ ನೈವೇದ್ಯವಾಗಿ ತಯಾರು ಮಾಡುತ್ತಾರೆ. ಇದಾದ ಬಳಿಕ ಭಕ್ತರಿಗೂ ಕೃಷ್ಣ ಮಠದ ಒಳಗಿರುವ ನವಗ್ರಹ ಕಿಂಡಿ ಎದುರು ಶಂಕದ ಮೂಲಕ ಕೃಷ್ಣನಿಗೆ ಅರ್ಘ್ಯ ಸಮರ್ಪಿಸುವ ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾದಿಂದ ಈ ಆಚರಣೆಗೆ ಕಡಿವಾಣ ಬಿದ್ದಿದೆ ಎನ್ನಲಾಗಿದೆ.
ಇನ್ನು ದೇಶದೆಲ್ಲೆಡೆದೆ, ಕೃಷ್ಣ ಮಂದಿರಗಳಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಹಂಪಿಯ ಬಾಲಕೃಷ್ಣ ದೇವಾಲಯ, ಚೆನ್ನೈನಲ್ಲಿರುವ ಪಾರ್ಥಸ್ವಾಮಿ ದೇವಾಲಯ, ಕೇರಳದ ಗುರುವಾಯೂರು ಕ್ಷೇತ್ರ, ಗುಜರಾತ್ನ ದ್ವಾರಕ, ಒಡಿಶಾದ ಪುರಿ ಜಗನ್ನಾಥ ದೇವಾಲಯ, ಉತ್ತರ ಪ್ರದೇಶದ ಇಸ್ಕಾನ್ ಮಂದಿರ ಸೇರಿದಂತೆ ಅನೇಕ ಕಡೆ ಅಷ್ಟಮಿ ಆಚರಣೆ ಮಾಡಲಾಗುತ್ತಿದೆ.
ಕೊರೊನಾ ಸಂಕಷ್ಟದಲ್ಲಿ ಅಷ್ಟಮಿ: ಕೊರೊನಾ ಭೀತಿಯ ನಡುವೆಯೂ ಜನರು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ. ಆದರೆ ಪ್ರಮುಖ ದೇಗುಲಗಳು ಬಂದ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಈ ಬಾರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇನ್ನೂ ಕೆಲವೊಂದು ಭಾಗದಲ್ಲಿ ಆನ್ಲೈನ್ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವ್ರತಾಚರಣೆ ಪೂರ್ಣಗೊಳಿಸಲು ಇದು ಸಹಕಾರಿಯಾಗಿದೆ.
ಕೃಷ್ಣ ಸಾರಿದ ಸಂದೇಶ: ಕೃಷ್ಣನ ಸಂದೇಶಗಳೆಲ್ಲವೂ ಹಿಂದೂ ಧರ್ಮದಲ್ಲಿ ಪೂಜ್ಯವಾಗಿ ಆರಾಧಿಸುವ ಭಗವದ್ಗೀತೆಯಲ್ಲಿದೆ. ಭಗವದ್ಗೀತೆಯನ್ನು ಅರಿತುಕೊಂಡವರು ಜೀವನ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ. ಬದುಕಿನ ಪ್ರಮುಖ ಅಂಶಗಳನ್ನು ಅರಿತುಕೊಳ್ಳುತ್ತಾರೆ ಎಂದು ಕೃಷ್ಣ ನುಡಿದಿದ್ದಾನೆ. ಇನ್ನು ಕೇವಲ ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಬೋಧಿಸದೆ ಜೀವನದಿಂದಲೂ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾನೆ. ಅವುಗಳಲ್ಲಿ ಕೆಲವು ಇಂತಿವೆ.
- ಇಂದಿನದ್ದು ನಾಳೆ ಇರುವುದಿಲ್ಲ. ಹಿಂದೆ ಏನು ನಡೆದಿದೆಯೋ ಅದು ಮುಗಿಯಿತು. ಈ ಕ್ಷಣದಲ್ಲಿ ಬದುಕುವುದು ಹೆಚ್ಚು ಮುಖ್ಯ.
- ನಿನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸು. ಫಲಿತಾಂಶ ಯಾರ ಕೈಯಲ್ಲೂ ಇಲ್ಲ.
- ಧರ್ಮದ ಹಾದಿಯಲ್ಲಿಯೇ ನಡೆ. ಧರ್ಮೋ ರಕ್ಷತಿ ರಕ್ಷಿತಃ. ಧರ್ಮಕ್ಕಾಗಿ ಸಂಬಂಧಗಳನ್ನು ಬದಿಗಿಟ್ಟು ಅದನ್ನು ಸಂರಕ್ಷಿಸುವುದಕ್ಕಾಗಿ ಹೋರಾಡಬೇಕು.
- ಯಾವಾಗಲೂ ಶಾಂತಿಯುತ ಮನಸ್ಸನ್ನು ಕಾಪಾಡಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕೂಡ ಅದರಲ್ಲಿ ತಾಳ್ಮೆ ಮತ್ತು ಸಮಾಧಾನ ಇರಲಿ.
- ನೀವು ಯಾರನ್ನಾದರೂ ಸ್ನೇಹಿತ ಎಂಬುದಾಗಿ ಪರಿಗಣಿಸಿದರೆ, ಅವರಿಗೆ ವಿಶ್ವಾಸಾರ್ಹರು ಮತ್ತು ನಂಬಿಕಸ್ಥರೂ ಆಗಿರಿ.